ಸೇವೆಗೆ ಸಂಬಂಧಿಸಿದಂತೆ ಎರಡು ಬಗೆಯ ಮನೋಧರ್ಮದ ಜನರನ್ನು ನಾವು ಸಮಾಜದಲ್ಲಿ ಕಾಣಬಹುದು. ‘ಸೇವೆಯೇ ಪರಮಧರ್ಮ’ ಎನ್ನುವ ತತ್ವಾದರ್ಶಕ್ಕೆ ಬದ್ಧರಾಗಿದ್ದುಕೊಂಡು ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಭಗವತ್ ಪ್ರೀತಿಗಾಗಿ ಪರರ ಸೇವೆಯಲ್ಲೇ ದೇವರನ್ನು ಕಾಣಲು ಬಯಸುವವರು ಮೊದಲ ವರ್ಗದವರಾದರೆ ಎರಡನೇ ವರ್ಗದವರು ತಮ್ಮ ಸ್ವಾರ್ಥ, ಸುಖ-ಸೌಕರ್ಯಗಳಿಗಾಗಿ ಇತರರಿಂದ ಸೇವೆಯನ್ನು ಮಾಡಿಸಿ ಕೊಳ್ಳಬಯಸುವವರು! ಪರರ ಸೇವೆಗಾಗಿಯೇ ತಮ್ಮನ್ನು ಮುಡಿಪಾಗಿಡುವ ನಿಸ್ವಾರ್ಥ ಮಂದಿ ಕಾಣಸಿಗುವುದು ಇಂದಿನ ದಿನಗಳಲ್ಲಿ ಅಪರೂಪ. ಅಂತಹವರ ಸಂಖ್ಯೆ ಕೈಬೆರಳೆಣಿಕೆಯಷ್ಟು. ಆದರೆ ಸ್ವಾರ್ಥಪರರಾಗಿ ಇತರರಿಂದ ತಮ್ಮ ಸೇವೆಯನ್ನು ಮಾಡಿಸಿಕೊಳ್ಳುವವರ ಸಂಖ್ಯೆಯೇ ಅಧಿಕ. ಪರರ ಸೇವೆಯಲ್ಲೇ ದೇವರನ್ನು ಕಾಣಲು ಪ್ರಯತ್ನಿಸುವ ನಿಸ್ವಾರ್ಥ ಮನೋಭಾವದ ಭಕ್ತರಿಗೆ ತಾನು ಸುಲಭದಲ್ಲಿ ಮಾತ್ರವಲ್ಲ ಬೇಗನೇ ಒಲಿಯುವೆನು ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ. ಅಂತೆಯೇ ತ್ಯಾಗದ ನಾಲ್ಕನೇ ಶ್ರೇಣಿಯಲ್ಲಿ ಶ್ರೀಕೃಷ್ಣನು ತನ್ನ ಭಕ್ತರು ಮಾಡಬೇಕೆಂದು ಅಪೇಕ್ಷಿಸುವ ತ್ಯಾಗವೇ ಸ್ವಾರ್ಥಪರತೆಯಲ್ಲಿ ಇತರರಿಂದ ಮಾಡಿಸಿಕೊಳ್ಳಬೇಕೆಂಬ ಕೆಟ್ಟ ಬಯಕೆಯನ್ನು ! ತನ್ನ ಸುಖಕ್ಕಾಗಿ ಇತರರಿಂದ ಹಣ ಮುಂತಾದ ಪದಾರ್ಥಗಳಿಗಾಗಿ ಸೇವೆಯನ್ನು ಮಾಡಿಸಿಕೊಳ್ಳಲು ಅಪೇಕ್ಷಿಸುವುದು ಅಥವಾ ಯಾಚಿಸುವುದು ತಪ್ಪು. ಪರರ ಹಿತಕ್ಕಾಗಿ ನಿಸ್ವಾರ್ಥವಾಗಿ ಸೇವೆಯನ್ನು ಮಾಡುವುದರಲ್ಲೇ ಭಗವಂತನನ್ನು ಕಾಣಲು ಪ್ರಯತ್ನಿಸುವುದು ಭಕ್ತಿಯ ಮತ್ತೊಂದು ರೂಪ. ಮಹಾತ್ಮಾ ಫುಲೆ, ಮಹಾತ್ಮಾ ಗಾಂಧೀಜಿ ಮುಂತಾದವರು ನಿಸ್ವಾರ್ಥ ಸೇವೆಯ ಮೂಲಕ ದೇವರೆಡೆಗೆ ಸಾಗುವ ಮಾರ್ಗವನ್ನು ಸೇವೆಯನ್ನು ತೋರಿರುವ ಮಹಾನ್ ವ್ಯಕ್ತಿಗಳು