ಆಸೆಗಳನ್ನು ತ್ಯಜಿಸದೆ ನಾವು ಐಹಿಕ ಬಂಧನದಿಂದ ಮುಕ್ತರಾಗುವುದು ಸಾಧ್ಯವಿಲ್ಲ. ಮಿಥ್ಯಾ ಪ್ರಪಂಚದ ಸಕಲ ವಸ್ತುಗಳೂ ನಮ್ಮ ಸುಖ-ಸೌಕರ್ಯಗಳನ್ನು ಹೆಚ್ಚಿಸುತ್ತವೆ ಎಂಬ ತಪ್ಪು ಭಾವನೆಯಿಂದಾಗಿ ನಮ್ಮನ್ನು ನಾವು ಐಹಿಕ ಜಗತ್ತಿಗೆ ಬಿಗಿಯಾಗಿ ಬಂಧಿಸಿದ್ದೇವೆ. ಹೊರಜಗತ್ತಿನಲ್ಲಿ ಇರುವ ವಸ್ತುಗಳೆಲ್ಲವೂ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಲು ಮುಖ್ಯ ಕಾರಣ ನಮ್ಮ ಪಂಚೇಂದ್ರಿಯಗಳಲ್ಲಿರುವ ಚುಂಬಕ ಶಕ್ತಿ, ಅದನ್ನು ಒಳಗೆ ಸೆಳೆದುಕೊಳ್ಳದೆ ನಾವು ಬಂಧಮುಕ್ತರಾಗುವುದು ಅಸಾಧ್ಯ. ನಮ್ಮ ಮನಸ್ಸನ್ನು ನಿಗ್ರಹಿಸದೆ ನಾವು ಪಂಚೇಂದ್ರಿಯಗಳ ಮೇಲೆ ಪ್ರಭುತ್ವವನ್ನು ಪಡೆಯಲಾರೆವು. ಆಚಾರ್ಯ ವಿನೋಬಾ ಭಾವೆಯವರು ಹೇಳುವಂತೆ ಈ ಪ್ರಪಂಚವು ದುಃಖಮಯವಾಗಿದೆ ಎಂಬ ಸತ್ಯವನ್ನು ನಾವು ಅರಿಯಬೇಕು. ಈ ಜಗತ್ತು ಸುಖಮಯವಾಗಿದೆ ಎಂದು ಭ್ರಮಿಸುವಾತನು ಮೂರ್ಖ, ಆದರೆ ದುಃಖಮಯವಾದ ಈ ಪ್ರಪಂಚವನ್ನು ಸುಖಮಯಗೊಳಿಸುವ ಪ್ರಯತ್ನಕ್ಕೆ ಮುಂದಾಗುವವನೇ ಬುದ್ಧಿವಂತ. ಅಂತಹ ಪ್ರಯತ್ನವು ಆತ್ಮಜ್ಞಾನದ ಮೂಲಕ ಮಾತ್ರ ಸಾಧ್ಯ. ನಾವು ಬಾಹ್ಯ ಜಗತ್ತಿನ ಸ್ಥಿತಿಗತಿಗಳನ್ನು ಬದಲಾಯಿಸಲಾರೆವು ನಿಜ, ಆದರೆ ನಮ್ಮ ಆಂತರ್ಯದ ದೃಷ್ಟಿಯಲ್ಲಿ ಮಾರ್ಪಾಡನ್ನು ತರಬಲ್ಲೆವು. ಯುದ್ಧ ಸನ್ನದ್ಧನಾಗಿ ಕುರುಕ್ಷೇತ್ರಕ್ಕೆ ಬಂದ ಅರ್ಜುನನು ತನ್ನ ಗುರು- ಹಿರಿಯರು-ಬಂಧುಗಳನ್ನು ಕಂಡೊಡನೆಯೇ ತಾನು ಯುದ್ಧ ಮಾಡೆನೆಂದು ಶಸ್ತ್ರಗಳನ್ನು ಕೆಳಗಿಟ್ಟಾಗ ಶ್ರೀಕೃಷ್ಣನು ಮಾಡಿದ್ದೇನು? ಗೀತೋಪದೇಶದ ಮೂಲಕ ಅರ್ಜುನನ ಆಂತರ್ಯದ ದೃಷ್ಟಿಯಲ್ಲಿ, ಭಾವದಲ್ಲಿ, ಚಿಂತನೆಯಲ್ಲಿ, ತಿಳಿವಳಿಕೆಯಲ್ಲಿ ಮಾರ್ಪಾಡನ್ನು ತಂದದ್ದು! ತನ್ನ ಪ್ರಿಯ ಮಿತ್ರ ಅರ್ಜುನನಿಗೆ ಅನುಕೂಲವಾಗಲೆಂದು ಕೃಷ್ಣನು ಬಾಹ್ಯ ಜಗತ್ತಿನ ಸ್ಥಿತಿಗತಿಯಲ್ಲಿ ಯಾವುದೇ ಮಾರ್ಪಾಡನ್ನು ತರಲಿಲ್ಲ! ನಾವಿದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರವೇ ನಮ್ಮ ಆಂತರ್ಯದ ದೃಷ್ಟಿಕೋನದ ಮಾರ್ಪಾಟಿಗಿರುವ ಮಹತ್ವ ಎಷ್ಟು ಎಂಬುದನ್ನು ನಾವು ಅರಿಯ ಬಹುದು.