ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮತ್ತು ವೃದ್ಧಾಶ್ರಮಗಳು ಇವರ ಜಂಟಿ ಆಶ್ರಯದಲ್ಲಿ ಅ.1ರಂದು ಉಡುಪಿ-ಬನ್ನಂಜೆಯ ಶ್ರೀ ನಾರಾಯಣಗುರು ಅಡಿಟೋರಿಯಂನಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಮಂಜಪ್ಪ ಸುವರ್ಣ ಅಂಬಲಪಾಡಿ ಹಾಗೂ ರುಕ್ಮಿಣಿ ಕೃಷ್ಣ ಭಟ್ ಇವರನ್ನು ಸನ್ಮಾನಿಸಲಾಯಿತು.
ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಂಜಪ್ಪ ಸುವರ್ಣರವರು 3 ವಿಭಾಗಗಳಲ್ಲಿ ವಿಜೇತರಾಗಿ ಬಹುಮಾನ ಪಡೆದರು. ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಹಾಗೂ ಹೆಸರಾಂತ ತಬಲಾ ವಾದಕರಾಗಿರುವ ಇವರು ಬಿಲ್ಲವ ಸೇವಾ ಸಂಘ(ರಿ.), ಅಂಬಲಪಾಡಿ ಇದರ ಮಾಜಿ ಅಧ್ಯಕ್ಷರು ಹಾಗೂ ಪ್ರಸಕ್ತ ಭಜನಾ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ತಬಲಾ ತರಬೇತಿ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಡಾ! ಕೆ.ವಿದ್ಯಾ ಕುಮಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ, ಖ್ಯಾತ ಮನೋತಜ್ಞ ಡಾ! ಪಿ.ವಿ. ಭಂಡಾರಿ, ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ಪಂಡಿತ್ ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಪ್ರಮುಖರಾದ ಸಿ.ಎಸ್. ರಾವ್, ವಾಸುದೇವ ರಾವ್, ಸದಾನಂದ ಹೆಗಡೆ, ಸರಳಾ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು