Home » ಆಂತರ್ಯದ ಆನಂದ
 

ಆಂತರ್ಯದ ಆನಂದ

by Kundapur Xpress
Spread the love

ಐಹಿಕ ಜಗತ್ತಿನಲ್ಲಿ ನಾವು ದಿನ ನಿತ್ಯವೆಂಬಂತೆ ಅನುಭವಿಸುವ ಸುಖ ಅಥವಾ ದುಃಖ ನಮ್ಮ ನೈಜ ಸ್ವಭಾವವನ್ನು ಮರೆಮಾಚಲು ಮುಖ್ಯ ಕಾರಣವೊಂದಿದೆ. ಅದೆಂದರೆ ಆ ಸುಖ- ದುಃಖಗಳು ಬಾಹ್ಯ ವಿದ್ಯಮಾನಗಳಿಂದ ಉತ್ಪನ್ನವಾದವುಗಳು. ಸುಖವನ್ನು ಅನುಭವಿಸುವ ಸಂದರ್ಭದಲ್ಲಿ ನಮ್ಮ ಮನಸ್ಸು ಹಿಗ್ಗುತ್ತದೆ ಮತ್ತು ದುಃಖವನ್ನು ಅನುಭವಿಸುವಾಗ ಅದು ಕುಗ್ಗುತ್ತದೆ. ಮನಸ್ಸಿನ ಹಿಗ್ಗುವಿಕೆ ಅಥವಾ ಕುಗ್ಗು ವಿಕೆಯು ಭಾವ ವಿಕಾರದ ಲಕ್ಷಣಗಳು. ನಮ್ಮ ಹೆಚ್ಚುಗಾರಿಕೆಯನ್ನು ಇತರರು ಹೊಗಳುವಾಗ ನಮ್ಮ ಮನಸ್ಸಿಗೆ ತುಂಬ ಹಿತವಾಗಿ ನಾವು ಆ ಹೊಗಳಿಕೆಯ ಪ್ರಭಾವದಿಂದ ಹಿಗ್ಗುತ್ತೇವೆ. ಹಾಗೆಯೇ ನಮ್ಮನ್ನು ಇತರರು ಹೀಗಳೆಯುವಾಗ, ಟೀಕಿಸುವಾಗ, ನಿಂದಿಸುವಾಗ ನಾವು ಮಾನಸಿಕವಾಗಿ ಕುಗ್ಗುತ್ತೇವೆ. ಮನಸ್ಸು ವೇದನೆಗೆ ಗುರಿಯಾಗಿ ದುಃಖಕ್ಕೆ ಜಾರುತ್ತದೆ. ಬದುಕಿನಲ್ಲಿ ನಮಗೆ ಕಷ್ಟಗಳು ಎದುರಾಗುವುದು ಕೂಡ ಬಾಹ್ಯ ಸಂಗತಿಗಳಿಂದಲೇ, ಅವುಗಳಿಗೆ ತೀವ್ರವಾಗಿ ಸ್ಪಂದಿಸುವ ನಮ್ಮ ಪಂಚೇಂದ್ರಿಯಗಳು ಒಡನೆಯೇ ನಮ್ಮ ಸ್ವಭಾವವನ್ನು ವಿಷಮತೆಗೆ ಗುರಿಪಡಿಸುತ್ತವೆ. ಮನಸ್ಸು ಸ್ವಸ್ಥ ಸುಂದರ, ಶಾಂತ ಹಾಗೂ ಶುದ್ಧವಾಗಿರಲು ಅದು ಭಾವ ವಿಕಾರಕ್ಕೆ ಒಳಗಾಗಕೂಡದು. ಅಂದ ಮೇಲೆ ಆಂತರಿಕವಾಗಿ ನಮ್ಮ ಮೂಲ ಸ್ವಭಾವ ಏನು? ಸುಖ-ದುಃಖಗಳಿಗೆ ಅತೀತವಾಗಿ ಸದಾ ಸಮತ್ವ ದಲ್ಲಿರುವ ಆತ್ಮನ ಸ್ವಭಾವವೇ ನಮ್ಮ ಮೂಲ ಸ್ವಭಾವ. ಆದರೆ ಪ್ರಕೃತಿಯ ಮಾಯೆಗೆ ಸಿಲುಕಿರುವ ನಮಗೆ ನಮ್ಮ ಮೂಲ ಸ್ವಭಾವದ ಅರಿವಿಲ್ಲ. ಬಾಹ್ಯ ವಿದ್ಯಮಾನಗಳಿಂದ ನಮ್ಮಲ್ಲಿ ಉಂಟಾಗುವ ಯಾವತ್ತೂ ಸುಖ-ದುಃಖಗಳು ನಿಜವಾದ ಸುಖ-ದುಃಖಗಳೇ ಅಲ್ಲ; ಅವು ಕೇವಲ ಛಾಯಾ ಸುಖ-ದುಃಖಗಳು. ಯಾವುದೇ ಆಸೆಯನ್ನು ನಿರೀಕ್ಷಿಸದ  ನಿಜವಾದ ನಿರಪೇಕ್ಷ ಆನಂದವು ಆತ್ಮನಿಂದ ದೊರಕಿದಾಗ ಮಾತ್ರವೇ ಅದರಲ್ಲಿ ದುಃಖದ ಛಾಯೆ ಕೂಡ ಇರಲೊಲ್ಲದು. ಅಂತಹ ಆನಂದವನ್ನು ನಾವು ನಮ್ಮ ಒಳಗಿನಿಂದ ಪಡೆಯಬಹುದು

   

Related Articles

error: Content is protected !!