ಬಾಹ್ಯ ಜಗತ್ತಿಗೆ ನಾವು ತೀವ್ರವಾಗಿ ಅಂಟಿಕೊಂಡಿರುವುದರಿಂದ ಬದುಕಿನಲ್ಲಿ ನಮಗೆ ಸುಖ-ದುಃಖಗಳು ನಿರಂತರ, ಪಂಚೇಂದ್ರಿಯಗಳ ಮೂಲಕ ನಾವು ಅನುಭವಿಸುವ ಸುಖ ನಿಜವಾಗಿರಲು ಸಾಧ್ಯವಿಲ್ಲ. ಅದು ಕೇವಲ ಛಾಯಾ ಸುಖ ಅಥವಾ ಕಲ್ಪನೆಯ ಸುಖ. ಕನ್ನಡಿಯಲ್ಲಿ ನಾವು ಕಾಣುವ ನಮ್ಮ ಪ್ರತಿಬಿಂಬದ ಹಾಗೆ. ಹುಟ್ಟಿನಿಂದ ಸಾವಿನವರೆಗೆ ನಮ್ಮ ಮುಖವನ್ನು ನಾವು ಕಣ್ಣಾರೆ ಕಾಣುವುದಿದೆಯೇ? ಕೇವಲ ಪ್ರತಿಬಿಂಬವನ್ನು ನೋಡಿಕೊಂಡೇ ನಾವು ನಮ್ಮ ಸ್ವರೂಪವನ್ನು ಪರಿಭಾವಿಸಬೇಕು. ನಾವು ಇಷ್ಟಪಡುವ, ಇಷ್ಟಪಡದ ಎಲ್ಲವನ್ನೂ ನಮ್ಮ ಕಣ್ಣು ಈ ಪ್ರಪಂಚದಲ್ಲಿ ಕಂಡೀತು. ಆದರೆ ಸ್ವತಃ ಅದು ನಮ್ಮ ಮೋರೆಯನ್ನು ನಮಗೆ ಕಾಣಿಸದು ! ಜೀವಿತದ ಉದ್ದಕ್ಕೂ ನಾವು ನಮ್ಮ ಪ್ರತಿಬಿಂಬವನ್ನು ಕಂಡೇ ತೃಪ್ತರಾಗಬೇಕು. ಆದರೂ ಕನ್ನಡಿಯಲ್ಲಿ ನಮ್ಮ ಮೋರೆಯನ್ನು ಅದೆಷ್ಟು ಬಾರಿ ಕಂಡರೂ ನಮಗೆ ತೃಪ್ತಿ ಇಲ್ಲ. ಅನುದಿನವೂ ಮತ್ತೆ ಮತ್ತೆ ನಮ್ಮ ಮೋರೆಯನ್ನು ಕಾಣಬೇಕೆಂಬ ಚಪಲ. ಪ್ರತಿಬಿಂಬವನ್ನೇ ನಿಜವೆಂದು ಪರಿಭಾವಿಸಿ ನಮ್ಮ ಮುಖದ ಸೌಂದರ್ಯಕ್ಕೆ ಬೀಗುವ ಪ್ರವೃತ್ತಿ ನಮ್ಮದು. ಹಾಗೆ ಬೀಗುವುದರಲ್ಲಿ ಅದೆಷ್ಟು ಸಂತಸ, ಅದೆಷ್ಟು ತೃಪ್ತಿ, ಅದೆಷ್ಟು ಅಹಂಕಾರ! ಅದನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲೆಂಬಂತೆ ನಿತ್ಯವೂ ದರ್ಪಣದಲ್ಲಿ ನಾವು ನಮ್ಮ ಮೋರೆಯನ್ನು ಅನ್ವೇಷಿಸುತ್ತೇವೆ. ಆದರೆ ಆ ಪ್ರತಿಬಿಂಬದಲ್ಲೂ ಕಾಣುವ ಸತ್ಯದ ಛಾಯೆಯನ್ನು ಗುರುತಿಸಲು ನಾವು ನಿರಾಕರಿಸುತ್ತೇವೆ; ಅಸತ್ಯದ ಛಾಯೆಯಲ್ಲಿ ಸೌಂದರ್ಯದ ಸ್ವರ್ಣ ರೇಖೆಗಳನ್ನು ಕಾಣಲು ಪರಿತಪಿಸುತ್ತೇವೆ. ನಮ್ಮ ಕುರಿತಾದ ನಮ್ಮ ಕಲ್ಪನೆ ಎಷ್ಟು ಮಿಥೈಯಿಂದ ಕೂಡಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ? ಬದುಕಿನಲ್ಲಿ ನಮ್ಮೆಲ್ಲ ಸುಖ-ದುಃಖಗಳ ಮೂಲ ಇರುವುದು ಇಲ್ಲೇ. ನಮ್ಮನ್ನೇ ಸರಿಯಾಗಿ ಕಾಣಲಾಗದ ನಮಗೆ ನೈಜ ಸುಖ-ದುಃಖದ ಪರಿಚಯ ಇರುವುದಾದರೂ ಹೇಗೆ? ನಿಜದ ಸುಖ ಮರೀಚಿಕೆಯಾಗಿರುವುದರಿಂದಲೇ ಬದುಕಿನಲ್ಲಿ ದುಃಖದ ಅಂಶ ಹೆಚ್ಚು!