ಉಡುಪಿ : ಬೂತ್ ಸಶಸ್ತೀಕರಣದ ಸಭೆಗಳು ಎಲ್ಲ ಮಂಡಲಗಳಲ್ಲಿ ಯಶಸ್ವಿಯಾಗಿ ನಡೆದಿವೆ. ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಲು ಮಂಡಲ ಮಟ್ಟದ ಸಮಿತಿ ರಚನೆಯಾಗಿದೆ. ನೈಋತ್ಯ ಪದವೀಧರರ ಮತ್ತು ನೈಋತ್ಯ ಶಿಕ್ಷಕರ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಗೆಲುವಿನ ಗುರಿಯೊಂದಿಗೆ ಪ್ರತೀ ಮಂಡಲ ಮಟ್ಟದಲ್ಲಿ ಸುಸಜ್ಜಿತ ತಂಡವನ್ನು ರಚಿಸಿ, ಮಂಡಲವಾರು ಕನಿಷ್ಠ 20,000 ಮೇಲ್ಪಟ್ಟ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೊಂದಾವಣೆಗೊಳಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನದ ಮೂಲಕ ವಿಶ್ವಾಸದ ಗೆಲುವಿಗೆ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಅಭಿಯಾನದಡಿ ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರಗಳ ಸಹಿತ ಸ್ವಚ್ಛತಾ ಅಭಿಯಾನ ಹಾಗೂ ಬೂತ್ ಮಟ್ಟದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ದಿನ ಮತ್ತು ಗಾಂಧಿ ಜಯಂತಿ ಆಚರಣೆಯ ಜೊತೆಗೆ ಜಿಲ್ಲೆಯಾದ್ಯಂತ ಗರಿಷ್ಠ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದಿವೆ. ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು ಸರಲ್ ಆಪ್ ನ್ನು ಡೌನ್ಲೋಡ್ ಮಾಡುವ ಮೂಲಕ ಕಾರ್ಯಕ್ರಮಗಳ ವರದಿಗಳನ್ನು ಅಪ್ಲೋಡ್ ಮಾಡುವ ಜೊತೆಗೆ ಪಕ್ಷದ ಸಮಗ್ರ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ಪಡೆಯಬಹುದು ಎಂದರು.
ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ, ಬಿಎಲ್ಎ-2 ನೇಮಕಾತಿ ಸಹಿತ ಪಕ್ಷದ ಮುಂದಿನ ಕಾರ್ಯ ಯೋಜನೆಗಳು ಮತ್ತು ಸಂಘಟನಾತ್ಮಕ ವಿಚಾರಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನನ್ನ ಮಣ್ಣು ನನ್ನ ದೇಶ ಅಭಿಯಾನದ ಜಿಲ್ಲಾ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಅಭಿಯಾನದ ಪ್ರಗತಿಯ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳಿಂದ ಸಂಗ್ರಹಿಸಿರುವ ಪವಿತ್ರ ಮಣ್ಣಿನ ಕಳಸಗಳನ್ನು ಅ.13 ರೊಳಗೆ ಮಂಡಲವಾರು ಬಿಜೆಪಿ ಜಿಲ್ಲಾ ಕಛೇರಿಗೆ ತಲುಪಿಸುವಂತೆ ಕೋರಿದರು. ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಂಡಲ ವ್ಯಾಪ್ತಿಯಲ್ಲಿ ನೈಋತ್ಯ ಪದವೀಧರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತದಾರರ ಪಟ್ಟಿಗೆ ವಿವಿಧ ಸಂಸ್ಥೆಗಳ ಸಿಬ್ಬಂದಿಗಳ ಸಹಿತ ಪ್ರತೀ ಬೂತ್ ಮಟ್ಟದಲ್ಲಿ ಕನಿಷ್ಠ 100 ರಂತೆ ಮಂಡಲ ವ್ಯಾಪ್ತಿಯಲ್ಲಿ 30,000 ಮೇಲ್ಪಟ್ಟು ಹೆಸರು ನೊಂದಾಯಿಸಲು ಕೈಗೊಂಡಿರುವ ಕಾರ್ಯ ಯೋಜನೆಯ ಬಗ್ಗೆ ಮಾಹಿತಿ. ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಿಕಟಪೂರ್ವ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್ ಬನ್ನಂಜೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು ಹಾಗೂ ಅಭಿಯಾನದ ವಿಧಾನಸಭಾ ಕ್ಷೇತ್ರ ತಂಡದ ಪ್ರಮುಖರು ಉಪಸ್ಥಿತರಿದ್ದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.