Home » ಅಸಮತೆಯ ಮೂಲ
 

ಅಸಮತೆಯ ಮೂಲ

by Kundapur Xpress
Spread the love

ಬದುಕಿನಲ್ಲಿ ನಾವು ಅನುಭವಿಸುವ ಸುಖ-ದುಃಖಗಳೆಲ್ಲವೂ ನಮ್ಮೊಳಗೆ ನಾವು ಸೃಷ್ಟಿಸಿಕೊಂಡ ಅಸಮತೆಯ ಫಲವಾಗಿವೆ. ಬಾಹ್ಯ ಜಗತ್ತಿನ ಆಕರ್ಷಣೆಗಳಿಗೆ ನಮ್ಮ ಇಂದ್ರಿಯಗಳನ್ನು ನಾವು ಸ್ಟೇಚ್ಛೆಯಿಂದ ತೆರೆದುಕೊಳ್ಳುವ ಪರಿಣಾಮವಾಗಿಯೇ ನಮ್ಮೊಳಗೆ ಅಸಮತೆ ಸೃಷ್ಟಿಗೊಳ್ಳುವುದು. ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲೇ ಬದುಕಿನ ಸುಖ ಅಡಗಿದೆ ಎಂಬ ತಪ್ಪು ಭಾವನೆಯಲ್ಲಿ ಬಾಹ್ಯ ಜಗತ್ತಿಗೆ ನಮ್ಮನ್ನು ನಾವು ಬಿಗಿಯಾಗಿ ಬಂಧಿಸಿಕೊಂಡಿದ್ದೇವೆ. ಪರಿಣಾಮವಾಗಿ ಹೊರ ಜಗತ್ತಿನ ಸಕಲ ಆಕರ್ಷಣೆಗಳು ಪ್ರಬಲ ಜೀವಂತಿಕೆಯಿಂದ ನಮ್ಮನ್ನು ಸೆಳೆಯುವುವು. ಬಾಹ್ಯ ಜಗತ್ತಿಗೆ ನಮ್ಮನ್ನು ನಾವು ತೆರೆದುಕೊಂಡಷ್ಟೂ ನಮ್ಮ ಆಂತರಿಕ ಜಗತ್ತಿನಿಂದ ನಾವು ದೂರವಾಗುವವು. ಹೊರ ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳುವುದೆಂದರೆ ಮಾಯೆಯ ಜಾಲಕ್ಕೆ ನಮ್ಮನ್ನು ಸಿಲುಕಿಸುವುದೆಂದೇ ಅರ್ಥ. ಮಿಥ್ಯಾ ಜಗತ್ತಿನಲ್ಲಿ ನಾವು ಕಂಡರಿಯುವ ಸುಖ-ದುಃಖಗಳೆಲ್ಲವೂ ನಿಜವಾದವುಗಳಲ್ಲ. ಅವೆಲ್ಲವೂ ಛಾಯಾತ್ಮಕವಾದವುಗಳು. ಕನ್ನಡಿಯೊಳಗೆ ಕಾಣುವ ಹಣದ ಗಂಟನ್ನು ಎಂದಾದರೂ ನಾವು ನಮ್ಮ ವಶಮಾಡಿಕೊಳ್ಳಲು ಸಾಧ್ಯವೇ? ಆದರೆ ಕಣ್ಣಿಗೆ ಹೊಡೆದು ಕಾಣುವ ಆ ಹಣದ ಗಂಟಿನ ಅತ್ಯಾಸೆಯಲ್ಲಿ ಅದು ಕೇವಲ ಪ್ರತಿಬಿಂಬವೆಂಬ ಸತ್ಯವನ್ನು ತಿಳಿಯುವ ಗೋಜಿಗೂ ನಾವು ಹೋಗುವುದಿಲ್ಲ. ಹೊರ ಜಗತ್ತಿನ ಆಕರ್ಷಣೆಗಳೆಲ್ಲವೂ ಕೇವಲ ಛಾಯಾ ಸ್ವರೂಪವನ್ನು ಹೊಂದಿವೆ. ಮಾತ್ರವಲ್ಲ ಬಾಹ್ಯ ಜಗತ್ತು ನಮ್ಮ ನೈಜ ಸ್ವಭಾವದ ಕೇವಲ ಛಾಯೆಯೆಆಗಿದೆ. ಈ ಛಾಯಾ ಸ್ವರೂಪದ ಸತ್ಯವನ್ನು ಅರಿಯಲು ನಾವು ನಮ್ಮ ಆಂತರಿಕ ಜಗತ್ತನ್ನು ಪ್ರವೇಶಿಸಬೇಕು. ಅದು ಬಾಹ್ಯ ಜಗತ್ತಿಗಿಂತ ಅದೆಷ್ಟೋ ಕೋಟಿ ಪಾಲು ದೊಡ್ಡದಿದೆ. ಅದರ ಬ್ರಹ್ಮಸ್ವರೂಪವನ್ನು ಅರಿಯಲು ಆತ್ಮನಲ್ಲಿ ನಾವು ಪ್ರತಿಷ್ಠಿತರಾಗುವುದು ಅಗತ್ಯ. ಸ್ವಾಮಿ ವಿವೇಕಾನಂದರು ಹೇಳುವ ಆತ್ಮನಲ್ಲಿ ಪ್ರತಿಷ್ಠಿತರಾದಾಗ ಮಾತ್ರವೇ ನಾವು ನಿಜವಾಗಿ ಈ ಪ್ರಪಂಚವನ್ನು ಪ್ರೀತಿಸಬಲ್ಲೆವು !

   

Related Articles

error: Content is protected !!