ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆರಂಭವಾಗುತ್ತಿರುವ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ” ನಡೆಯಿತು ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ.ಶಾಂತಾರಾಮ ಪ್ರಭು ಅವರು ಉದ್ಘಾಟಿಸಿ ಮಾತನಾಡಿ ಸಮುದಾಯದ ಒಳಿತು ಮತ್ತು ಉನ್ನತಿಯ ಉದ್ದೇಶದ ನೆಲೆಯಲ್ಲಿ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಆರಂಭಿಸುತ್ತಿದ್ದೇವೆ. ಇದರಿಂದ ಕುಂದಾಪುರದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಬೆಳೆಸಿಕೊಳ್ಳಲು ಅವಕಾಶವಿದೆ. ಜೊತೆಗೆ ಕುಂದಾಪುರ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಬಹುದು ಎಂದು ಹೇಳಿದರು.
ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಮಾರ್ಗದರ್ಶಕರಾದ ಯು.ಎಸ್.ಶೆಣೈ ಮಾತನಾಡಿ, ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಮಾಜಮುಖಿಯಾಗೋಣ. ಎಲ್ಲರೂ ಒಟ್ಟಾಗಿ ರೇಡಿಯೋ ಕುಂದಾಪ್ರ 89.6 ಎಫ್.ಎಂ ಮೂಲಕ ಜಗತ್ತಿನಾದ್ಯಂತ ಕುಂದಾಪುರದ ಕಂಪನ್ನು ಪಸರಿಸೋಣ ಎಂದು ಹೇಳಿದರು.ಮತ್ತು ವಿವಿಧ ಕಾರ್ಯಕ್ರಮಗಳನ್ನು ನೀಡಬಹುದು ಎಂಬುದರ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ಮಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಸುಮಲತಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ರೇಡಿಯೋ ಕುಂದಾಪ್ರ 89.6 ಎಫ್.ಎಂ ಇದರ ಕಾರ್ಯಕ್ರಮಗಳ ನಿರ್ವಾಹಕರಾದ ಜ್ಯೋತಿ ಸಾಲಿಗ್ರಾಮ ವಂದಿಸಿದರು.