ಹೊರಗಿನ ಜಗತ್ತಿನೊಂದಿಗೆ ನಮ್ಮ ಸ್ಪಂದನ ಎಷ್ಟು ತೀವ್ರವಾಗಿರುವುದೋ ಅಷ್ಟರ ಮಟ್ಟಿಗೆ ನಮ್ಮಲ್ಲಿ ತಮ್ಮ ಹಾಗೂ ರಜೋಗುಣವು ತೀವ್ರವಾಗಿರುವುದು. ಕಾಮನೆಗಳ ತುಡಿತವೂ ತೀವ್ರವಾಗಿರುವುದು. ಆಸೆ-ಆಕಾಂಕೆಗಳು ಸರಪಳಿಯಂತೆ ಬೆಳೆಯುತ್ತಿರುವುವು. ಪರಿಣಾಮವಾಗಿ ನಿರಾಶೆ, ದುಃಖಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ. ಮಿಥ್ಯಾಜಗತ್ತನ್ನೇ ಸತ್ಯವೆಂದು ಭಾವಿಸಿ ಬದುಕುವ ಈ ಪರಿಯನ್ನು ಭ್ರಮಾಧೀನ ಬದುಕಿಗೆ ಹೋಲಿಸಬಹುದು. ಮಿಥ್ಯಾಜಗತ್ತಿನ ಎಲ್ಲ ಸುಖ, ಸಂಪತ್ತು, ಐಶ್ವರ್ಯ, ಧನ-ಕನಕಗಳು ಸಮತ್ವವನ್ನು ಸಾಧಿಸಿದ ಯೋಗಿಗೆ ಕೇವಲ ನಿರ್ಜೀವ ವಸ್ತುಗಳು. ಅಂತಹ ಯೋಗಿಯ ದೃಷ್ಟಿಯಲ್ಲಿ ನಾವು ಐಹಿಕ ಬದುಕಿನಲ್ಲಿ ಅಮೂಲ್ಯವೆಂದು ಭಾವಿಸುವ ಚಿನ್ನ, ಬೆಳ್ಳಿ, ಮುತ್ತು, ರತ್ನ, ಹವಳ ಎಲ್ಲವೂ ಕಲ್ಲುಮಣ್ಣಿಗೆ ಸಮವಾದವು. ಅವೆರಡೂ ಆತನಲ್ಲಿ ಯಾವ ಭಾವವಿಕಾರಗಳನ್ನೂ ಉಂಟುಮಾಡುವುದಿಲ್ಲ. ಹಾಗೆಯೇ ಜನನ ಮರಣಗಳು. ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರಪಂಚದಲ್ಲಿ ನಾವು ಯಾವುದೆಲ್ಲವನ್ನು ಒಳ್ಳೆಯವೆಂದು ಭಾವಿಸುವೆವೋ ಅವೆಲ್ಲವೂ ಕೆಸರ ಗುಂಡಿಯಲ್ಲಿ ಮಕ್ಕಳಿಗೆ ಸಿಕ್ಕಿದ ಗಾಜಿನ ಮಣಿಗಳಂತೆ! ಮಿಥ್ಯಾ ಬದುಕಿನ ಭ್ರಮೆಯಿಂದ ಹೊರ ಬರಲಾಗದವರಿಗೆ ಅವೆಲ್ಲವೂ ಅತ್ಯಮೂಲ್ಯವಾದವುಗಳು. ಜನನ-ಮರಣಗಳ ಸಂದರ್ಭದಲ್ಲಿ ನಾವು ಕಾಣಬೇಕಾಗಿರುವ ಸಮತ್ವ ಯಾವುದು? ಅವೆರಡೂ ಒಂದೇ ಸತ್ಯದ ಸ್ಥಿತಿಗೆ ಇರುವ ಭಿನ್ನಭಿನ್ನ ಹೆಸರುಗಳು. ಒಮ್ಮೆ ಬದುಕುತ್ತಿರುವುದಕ್ಕೆ ಒಮ್ಮೆ ಸಾಯುತ್ತಿರುವುದಕ್ಕೆ ಹೋರಾಡುತ್ತಿರುವ ಮಾಯೆ! ಬಾಹ್ಯ ಜಗತ್ತಿನ ವಿದ್ಯಮಾನಗಳ ಸತ್ಯವನ್ನು ಅರಿಯಲು ಪ್ರಯತ್ನಿಸಿದರೆ ಅಲ್ಲಿನ ಆಕರ್ಷಣೆಗಳಿಂದ ಹೊರಬರಲು ಸಾಧ್ಯವಾಗುವುದು. ತತ್ ಪರಿಣಾಮವಾಗಿ ಆತ್ಮನಲ್ಲಿ ಪ್ರತಿಷ್ಠಿತರಾಗಲು ಉದ್ಯುಕ್ತರಾಗಬಹುದು. ಭವಬಂಧನಗಳಿಂದ ಹೊರಬರಲು ಸಾಧ್ಯವಾದಲ್ಲಿ ಅಂತರ್ ಮುಖಿಯಾಗಲು ಸಾಧ್ಯವಾಗುವುದು. ಆಗಲೇ ಆಂತರ್ಯದೊಳಗೆ ಆಧ್ಯಾತ್ಮಿಕ ಬೆಳಕು ಮೂಡುವುದು!