ಬೆಂಗಳೂರು: ರಾಜ್ಯದಲ್ಲಿ ಶಿವಾನಂದ ಪಾಟೀಲ, ಡಿ.ಕೆ. ಶಿವಕುಮಾರ್, ಬೈರತಿ ಸುರೇಶ್, ಯತೀಂದ್ರ, ಇತರ ಸಚಿವರು ಹಣ ಸಂಗ್ರಹಿಸಿದ್ದಾರೆ. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಣದ ವಹಿವಾಟು ನಡೆಯುತ್ತಿದೆ. ಇದೆಲ್ಲದರ ಕುರಿತು ಸಿಬಿಐ – ಇಡಿ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ಸಿಕ್ಕಿದ ರೂ.94 ಕೋಟಿ ನಗದು ಮತ್ತು ರೂ.8 ಕೋಟಿ ಮೌಲ್ಯದ ಚಿನ್ನ ಸಿಕ್ಕಿದ್ದು, 102 ಕೋಟಿ ರೂ. ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ. 1 ಸಾವಿರ ಕೋಟಿ ರೂ. ಸಂಗ್ರಹಿಸಿದ ಮಾಹಿತಿ ಇದೆ ಎಂದು ತಿಳಿಸಿದರು.
ಅಬಕಾರಿ, ಕೈಗಾರಿಕಾ ವಲಯ, ಎಲ್ಲ ಪೊಲೀಸ್ ಠಾಣೆಗಳಿಗೆ ಕಲೆಕ್ಷನ್ ಗುರಿ ಕೊಟ್ಟಿದ್ದಾರೆ. ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಸೇರಿ ಅಧಿಕಾರಿಗಳ ವರ್ಗಾವಣೆ ವೇಳೆ ಹಣ ಪಡೆದಿದ್ದಾರೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿ ವರ್ಗಾವಣೆಗೆ ಕನಿಷ್ಠ 1 ರಿಂದ 3 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು.
ನೀರಾವರಿ, ಲೋಕೋಪಯೋಗಿ ಇಲಾಖೆ ಸೇರಿ ಬೆಂಗಳೂರಿನಲ್ಲಿ ವಿಪರೀತ ಹಣ ಸಂಗ್ರಹಿಸಿದ್ದಾರೆ. ಅಂಥ ಸಾವಿರಾರು ಕೋಟಿ ಹಣವನ್ನು ಚುನಾವಣೆ ನಡೆಯುವ ಪಂಚ ರಾಜ್ಯಗಳಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅದರಲ್ಲಿ ಎಷ್ಟು ಕಳುಹಿಸುತ್ತಾರೆ ಎಷ್ಟು ಜೇಬಿಗೆ ಇಳಿಸುತ್ತಾರೆ ಎಂಬುದರ ತನಿಖೆಯೂ ಆಗಬೇಕಿದೆ ಎಂದು ಒತ್ತಾಯಿಸಿದರು. ನಿನ್ನೆ ಮತ್ತು ಮೊನ್ನೆ ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಸೇರಿ 117ಕ್ಕೂ ಹೆಚ್ಚು ಕಡೆ ಬಿಜೆಪಿ ಹೋರಾಟ ಮಾಡಿದೆ. ನಮ್ಮ ಹೋರಾಟ ಮುಂದುವರೆಯಲಿದೆ. ತನಿಖೆಗೆ ಕೊಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಪ್ರಕಟಿಸಿದರು