Home » ಆಂತರಿಕ ಜಗತ್ತು |
 

ಆಂತರಿಕ ಜಗತ್ತು |

by Kundapur Xpress
Spread the love

ಜನನ-ಮರಣಗಳನ್ನು ಗೆಲ್ಲಲು ಸೃಷ್ಟಿಯ ವೈವಿಧ್ಯದ ಪ್ರಭಾವದಿಂದ ಪಾರಾಗುವುದು ಅಗತ್ಯ ಎನ್ನುವಲ್ಲಿ ಮೋಕ್ಷ ಸಾಧನೆಯ ಚಿಂತನೆ ಅಡಕವಾಗಿದೆ. ಸೃಷ್ಟಿಯ ವೈವಿಧ್ಯದಿಂದ ಆಕರ್ಷಿತರಾಗುವ ಮೂಲಕ ನಾವು ಕಾಮನೆಗಳ ಉಗ್ರಾಣವೇ ಆಗಿ ಬಿಡುತ್ತೇವೆ. ರಾಜಸ ಹಾಗೂ ತಾಮಸ ಗುಣಗಳೇ ನಮ್ಮಲ್ಲಿ ವಿಜೃಂಭಿಸುತ್ತವೆ. ಆತ್ಮನ ಅರಿವಿಗೆ ಅವಶ್ಯವಿರುವ ಸಾತ್ವಿಕ ಗುಣವನ್ನು ಅವು ಸಂಪೂರ್ಣವಾಗಿ ಮುಚ್ಚಿಹಾಕುತ್ತವೆ. ಆತ್ಮನ ಸಹಜ ಸ್ವಭಾವವಾದ ಸಮತ್ವವನ್ನು ನಾಶಮಾಡುತ್ತವೆ. ಆ ಮೂಲಕ ಸಂತೋಷ, ದುಃಖ ಮೊದಲಾದ ಭಾವ ವಿಕಾರಗಳನ್ನು ಉಂಟುಮಾಡುತ್ತವೆ. ಸುಖ-ಸಂಪತ್ತು ಅಧಿಕಾರ-ಅಂತಸ್ತು, ಕೀರ್ತಿ ಮುಂತಾದ ಅನಿತ್ಯ ವಸ್ತುಗಳನ್ನು ತೀವ್ರವಾಗಿ ಬಯಸುವಂತೆ ಮಾಡುತ್ತವೆ. ಭಾವಾತಿರೇಕವನ್ನು ಉಂಟು ಮಾಡಬಲ್ಲ ಸುಖ ಮತ್ತು ದುಃಖ ನಿಜಕ್ಕೂ ನಮ್ಮ ನೈಜಸ್ವಭಾವವನ್ನು ಮರೆಮಾಡುತ್ತವೆ. ಮಕ್ಕಳಂತೆ ವರ್ತಿಸುವ ಹಾಗೆ ಪ್ರಚೋದಿಸುತ್ತವೆ. ಸೂಕ್ಷ್ಮವಾಗಿ ನೋಡಿದರೆ ನಮ್ಮೆಲ್ಲ ಭಾವವಿಕಾರಗಳ ಪರಿಣಾಮಗಳು ಮಕ್ಕಳಾಟದಂತೆಯೇ ಬಾಲಿಶವಾಗಿ ಇರುತ್ತವೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ, ಹೊಗಳಿಕೆ-ತೆಗಳಿಕೆಗಳಿಂದ ವಿಚಲಿತರಾಗದೆ ಇರುವುದರಲ್ಲಿ ಮನಸ್ಸಿನ ಸಮತ್ವವನ್ನು ನಾವು ಕಾಯ್ದುಕೊಳ್ಳಬೇಕು. ಆ ಸಮತ್ವವನ್ನು ಕಾಯ್ದುಕೊಳ್ಳಬೇಕಾದರೆ ಸೃಷ್ಟಿಯ ವೈವಿಧ್ಯದ ಪ್ರಚೋದನೆಯಿಂದ ಪಾರಾಗುವುದು ಅಗತ್ಯ. ಅದಕ್ಕಾಗಿ ಬೇಕಿರುವುದು ಆತ್ಮನ ಅರಿವು. ಆ ಅರಿವಿನಲ್ಲಿಸಿಗುವ ಆನಂದವು ಅನಂತವಾದದ್ದು. ಬಾಹ್ಯ ಜಗತ್ತಿಗಿಂತ ಕೋಟಿ ಪಾಲು ದೊಡ್ಡದಿರುವ ಆಂತರಿಕ ವರ್ತುಲದಲ್ಲಿ ಆತ್ಮನ ಇರುವಿಕೆಯನ್ನು ಕಾಣಲು ದೇಹ ಪ್ರಜ್ಞೆಯನ್ನು ಮೀರಲು ಪ್ರಯತ್ನಿಸಬೇಕು. ದೇಹಪ್ರಜ್ಞೆ ತೀವ್ರವಾಗಿರುವಷ್ಟು ಕಾಲವೂ ನಾವು ದೇವರ ನಿರಾಕಾರ, ನಿರ್ಗುಣ ನಿಜ ಸ್ವರೂಪದ ಕುರಿತು ಯೋಚಿಸಲಾರೆವು.

   

Related Articles

error: Content is protected !!