ಆತ್ಮಜ್ಞಾನವೇ ನಿಜವಾದ ಜ್ಞಾನವಾದರೂ ಲೌಕಿಕ ಜ್ಞಾನವನ್ನು ಪಡೆಯದೆ ನಾವು ಮುಂದೆ ಸಾಗುವಂತಿಲ್ಲ. ಲೌಕಿಕ ಜ್ಞಾನದ ಉದ್ದೇಶ ಕೇವಲ ಲೌಕಿಕ ಸುಖ- ಸಂತೋಷ, ಅಧಿಕಾರ, ಅಂತಸ್ಸು ಕೀರ್ತಿ, ಐಶ್ವರ್ಯಗಳನ್ನು ಪಡೆಯುವುದಕ್ಕೆ ಸೀಮಿತವಾಗಿರಕೂಡದು. ಇವಿಷ್ಟನ್ನು ಪಡೆಯುವುದೇ ಉದ್ದೇಶವಾಗಿಟ್ಟುಕೊಳ್ಳುವ ಶಿಕ್ಷಣ ಕ್ರಮ ಒಳಿತಿಗಿಂತ ಹೆಚ್ಚು ಕೆಡುಕನ್ನೇ ಉಂಟುಮಾಡುವುದು. ಆಸೆಯ ಸ್ಥಾನವನ್ನು ದುರಾಸೆಯು ಆಕ್ರಮಿಸಿಕೊಳ್ಳುವುದು, ಮಹತ್ವಾಕಾಂಕ್ಷೆಯ ಸ್ಥಾನವನ್ನು ಆಸೆಬುರುಕತನವು ಆಕ್ರಮಿಸಿಕೊಳ್ಳುವುದು. ಅಧಿಕಾರ-ಅಂತಸ್ತುಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಪೋಷಿಸುವುವು. ಕೊನೆಗೆ ಏಷ್ಟೆಂದರೆ ತನಗೆ ಸಿಕ್ಕ ವಿದ್ಯೆಯಾಗಲೀ ಅದರಿಂದ ದೊರೆತ ಪ್ರಯೋಜನಗಳಾಗಲೀ ಇತರರಿಗೆ ಸಿಗಕೂಡದು ಎಂಬ ಸ್ವಾರ್ಥಪರ ಮನೋಭಾವವನ್ನೂ ಅದು ಪೋಷಿಸುವುದು. ವಿದ್ಯಾ ದದಾತಿ ವಿನಯಂ’ -ವಿದ್ಯೆಯ ನಿಜವಾದ ಗುರಿ ವಿನಯವನ್ನು ಸಂಪಾದಿಸುವುದು, ನಮ್ಮೊಳಗಿನ ಅಹಂಕಾರವನ್ನು ನಾಶ ಮಾಡುವುದು ಹಾಗೂ ಸರ್ವೇ ಜನಾ ಸುಖಿನೋ ಭವಂತು ಎಂಬ ಉನ್ನತ ಧೈಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ. ಲೌಕಿಕ ವಿದ್ಯೆ ಆಧ್ಯಾತ್ಮಿಕ ದೃಷ್ಟಿಯಿಂದ ‘ಅವಿದ್ಯೆ’ ಎನಿಸಿಕೊಳ್ಳುವುದಾದರೂ ಆತ್ಮಜ್ಞಾನವನ್ನು ಪಡೆಯುವ ಪ್ರಯತ್ನದಲ್ಲಿ ಲೌಕಿಕ ವಿದ್ಯೆಯು ಉನ್ನತ ಧೈಯಾದರ್ಶಗಳ ನೆಲೆಯಲ್ಲಿ ಗಟ್ಟಿ ತಳಪಾಯವನ್ನು ಒದಗಿಸುತ್ತದೆ. ತಳಪಾಯವೇ ಗಟ್ಟಿಯಾಗಿಲ್ಲದಿದ್ದರೆ ಕಟ್ಟಡವು ನೆಟ್ಟಗೆ ನಿಲ್ಲುವುದೆಂತು? ‘ದೇವರ ಭಯವೇ ಜ್ಞಾನದ ಆರಂಭ’ – ಆದುದರಿಂದ ಲೌಕಿಕ ವಿದ್ಯೆಯು ನಿಜ ವಾದ ಅರ್ಥದಲ್ಲಿ ನಿರಾಕಾರ, ನಿರ್ಗುಣ ಸ್ವರೂಪನಾದ ದೇವರ ಬಗ್ಗೆ ‘ಭಯ’ವನ್ನು ಹುಟ್ಟಿಸಬೇಕು. ಆ ಭಯದ ಹುಟ್ಟಿನಲ್ಲಿ ‘ಜ್ಞಾನ’ದ ಆರಂಭ ಕಾಣಿಸಿಕೊಳ್ಳುವುದು!