ಜೀವಾತ್ಮನು ಪರಮಾತ್ಮನ ಅಂಶವಾಗಿರುವುದರಿಂದಲೇ ನಾವು ಅವುಗಳಲ್ಲಿ ಭೇದವನ್ನು ಕಾಣಲಾರೆವು. ಪರಮಾತ್ಮನು ನಿರ್ಗುಣ, ನಿರಾಕಾರ ಸ್ವರೂಪವನ್ನು ಹೊಂದಿರುವಂತೆ ಜೀವಾತ್ಮನು ನಿರ್ಗುಣನೂ ನಿರಾಕಾರನೂ ಆಗಿರುವನು. ಆದುದರಿಂದಲೇ ಆತ್ಮವು ಸುಖ-ದುಃಖಗಳಿಗೆ ಆತೀತವಾಗಿದೆ. ಆದರೆ ಜೀವಾತ್ಮನು ದೇಹವೆಂಬ ದೇಗುಲದೊಳಗೆ ವಿರಾಜಮಾನನಾಗಿರುವಷ್ಟು ಕಾಲ ಬಾಹ್ಯ ಜಗತ್ತಿನ ಮಾಯೆಯಿಂದ ಆವರಿಸಲ್ಪಟ್ಟಿರುವುದು ದಿಟ. ಈ ಮಾಯೆಯ ಪ್ರಭಾವದಿಂದ ಆತ್ಮನ ಅಸ್ತಿತ್ವವನ್ನು ನಾವು ಅರಿಯಲಾರೆವು. ಅಂತೆಯೇ ಮಿಥ್ಯಾ ಜಗತ್ತಿನ ಸಕಲ ಆಕರ್ಷಣೆಗಳಿಗೆ ಗುರಿಯಾಗುವ ಮೂಲಕ ಹುಟ್ಟು-ಸಾವಿನ ಪರಮ ಸತ್ಯಗಳನ್ನು ಎದುರಿಸುವ ಮನೋಬಲವನ್ನೂ ಕಳೆದುಕೊಳ್ಳುವೆವು. ಸ್ವಾಮಿ ವಿವೇಕಾನಂದರು ಹೇಳುವಂತೆ ಜನನ-ಮರಣಗಳೆರಡೂ ಒಂದೇ ಸತ್ಯಸ್ಥಿತಿಗೆ ಇರುವ ವಿಭಿನ್ನ ಹೆಸರುಗಳು. ಒಮ್ಮೆ ಬದುಕುವುದಕ್ಕೆ, ಒಮ್ಮೆ ಸಾಯುವುದಕ್ಕೆ ಹೋರಾಡುತ್ತಿರುವ ಮಾಯೆ! ಹುಟ್ಟು, ಸಾವು ಹಾಗೂ ಅವೆರಡು ಸತ್ಯಗಳ ನಡುವಿನ ಕನಸಿನಲ್ಲಿ ಬದುಕನ್ನು ಕಳೆಯುವ ನಮಗೆ ನಮ್ಮನ್ನು ನಾವು ಅರಿಯುವುದೇ ಬಹಳ ದೊಡ್ಡ ಸವಾಲು. ಗುರುದೇವ ರವೀಂದ್ರನಾಥ ಠಾಗೋರರು ಒಂದೆಡೆ ಹೇಳುತ್ತಾರೆ: ನೀನೇನಾಗಿರುವೆಯೋ ಅದನ್ನು ನೀನು ಕಾಣಲಾರೆ; ನೀನೇನು ಕಾಣಬಲ್ಲೆಯೋ ಅದು ನಿನ್ನ ನೆರಳು ಮಾತ್ರ! ಮಿಥ್ಯಾ ಜಗತ್ತಿನಲ್ಲಿ ಹುಟ್ಟು ಸಾವು ಮತ್ತು ಅವೆರಡರ ನಡುವಿನ ಸ್ವಪ್ನದ ಬದುಕು ಕೇವಲ ಛಾಯೆಯ ಬದುಕು. ಅದಕ್ಕೆಂದೇ ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವುದು ಹೀಗೆ: ಈ ಆತ್ಮನು ಯಾವ ಕಾಲದಲ್ಲಿಯೂ ಹುಟ್ಟುವವನೂ ಅಲ್ಲ; ಸಾಯುವವನೂ ಅಲ್ಲ, ಈ ಆತ್ಮ ಜನ್ಮರಹಿತ. ಶರೀರ ಕೊಲ್ಲಲ್ಪಟ್ಟರೂ ಆತ್ಮನು ಕೊಲ್ಲಲ್ಪಡುವುದಿಲ್ಲ!