ಮಹಾಭಾರತದಲ್ಲಿ ಬರುವ ‘ಯಕ್ಷಪ್ರಶ್ನೆ’ಯ ಪ್ರಸಂಗ ಅತ್ಯಂತ ಮನನೀಯವಾಗಿದೆ ಆ ಪ್ರಸಂಗದಲ್ಲಿ ಯಕ್ಷನು ಧರ್ಮರಾಯನನ್ನು ಕುರಿತು ಕೇಳುವ ಪ್ರಶ್ನೆಗಳು ಮೇಲ್ನೋಟಕ್ಕೆ ತುಂಬ ಸರಳವಾಗಿ ಕಾಣುವುದಾದರೂ ಅವುಗಳಲ್ಲಿ ಅಡಕವಾಗಿರುವ ಆಧ್ಯಾತ್ಮಿಕ ಅಂಶಗಳು ಬಹಳ ಘನವತ್ತಾಗಿವೆ. ಈ ಪ್ರಪಂಚದಲ್ಲಿ ಅತ್ಯಂತ ವಿಸ್ಮಯಕರ ಸಂಗತಿ ಯಾವುದು ಎಂಬ ಪ್ರಶ್ನೆಗೆ ಧರ್ಮರಾಯನು ಕೊಡುವ ಉತ್ತರ ಐಹಿಕ ಪ್ರಪಂಚದಲ್ಲಿ ಸ್ವಾರ್ಥಪರರಾಗಿ ಮುಳುಗಿರುವ ನಮ್ಮನ್ನೇ ದೃಷ್ಟಿಯಲ್ಲಿರಿಸಿದಂತಿದೆ. ಒಂದಲ್ಲ ಒಂದು ದಿನ ಸಾವು ಬರುವುದು ಖಚಿತವೆಂದು ತಿಳಿದೂ ಅದನ್ನು ಪೂರ್ಣವಾಗಿ ಮರೆತು ಸ್ವಾರ್ಥಿಯಾಗಿ ಬದುಕುವ ಮನುಷ್ಯನ ಬಾಳ್ವೆಯ ಪರಿ ಈ ಜಗತ್ತಿನ ಬಲು ದೊಡ್ಡ ವಿಸ್ಮಯ. ನಾವು ಸುಖವನ್ನು ಅಪೇಕ್ಷಿಸುವಾಗ ಅದರಿಂದ ದೇಹಕ್ಕೆ ಉಂಟಾಗುವ ಆನಂದಕ್ಕೆ ಹಾತೊರೆಯುವೆವು. ಇಂದ್ರಿಯ ಸುಖವೇ ನಿಜವಾದ ಸುಖವೆಂಬ ಭ್ರಮೆಯೇ ಇದಕ್ಕೆ ಕಾರಣ. ತಾಮಸ ಪ್ರವೃತ್ತಿ ತೀವ್ರವಾಗಿರುವವರಲ್ಲಿ ದೇಹಕ್ಕೆ ಮೀರಿದ ಸುಖದ ಅನುಭೂತಿಯೇ ಇರದು. ರಾಜಸ ಪ್ರವೃತ್ತಿ ಇರುವವರಲ್ಲಿ ಮನಸ್ಸಿನ ಆನಂದ ಸ್ವಲ್ಪಮಟ್ಟಿಗೆ ಅನುಭವಕ್ಕೆ ಬಂದರೂ ದೇಹ ಸುಖದ ದೇಹ ಸುಖಕ್ಕೆ ಮೀರಿದ ಯಾವತ್ತೂ ಆನಂದದ ಅನುಭೂತಿಯಿಂದ ವಂಚಿತರಾಗುವೆವು. ದೇಹವೇ ಅಪೇಕ್ಷೆಯ ತೀವ್ರತೆಯಲ್ಲಿ ಆ ಮಾನಸಿಕ ಆನಂದದ ಮಹತ್ವ ಮರೆಯಾಗುವುದು. ಆದುದರಿಂದಲೇ ಪ್ರಧಾನವಾಗಿರುವಲ್ಲಿ ಅದಕ್ಕೆ ಎದುರಾಗುವ ಸಾವಿನ ಬಗ್ಗೆ ಅತೀವ ಭಯವಿರುವುದು ಅನಿವಾರ್ಯ. ವಿಪರ್ಯಾಸವೆಂದರೆ ಈ ಭಯವನ್ನು ಮರೆಯುವ ನಾಟಕವೇ ಬದುಕು! ನಾಟಕವೆಂಬ ಈ ಬದುಕಿನಲ್ಲಿ ನಾವು ಸಾವನ್ನು ಮರೆಯುವಷ್ಟು ತೀವ್ರವಾಗಿ ಮುಳುಗಿ ಹೋಗಿರುವೆವು. ಹಾಗಿರುವಾಗ ಆತ್ಮನ ಅರಿವು ಹೇಗೆ ಉಂಟಾದೀತು? ಮಿಥ್ಯಾ ಜಗತ್ತಿನ ಆಕರ್ಷಣೆಯಿಂದ ಮುಕ್ತರಾಗಲು ದೇಹ ಬಂಧನದಿಂದ ಪಾರಾಗುವುದು ಅನಿವಾರ್ಯ