ಇಂದಿನ ಸ್ಪರ್ಧಾತ್ಮಕ ಜೀವನಕ್ಕೆ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಮನೋಭಾವಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಲಿತುಕೊಳ್ಳಬೇಕು. ಕಂಪ್ಯೂಟರ್ ಮತ್ತು ಅಂತರ್ಜಾಲಗಳಲ್ಲಾದ ಅಪಾರ ಬದಲಾವಣೆ ವ್ಯವಹಾರ ಕ್ಷೇತ್ರದಲ್ಲಿ ಸ್ಥಿತ್ಯಂತರಗಳನ್ನು ಸೃಷ್ಟಿಸಿದೆ. ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಅಪಾರವಾದ ಉದ್ಯೋಗಾವಕಾಶಗಳಿದ್ದು ಅಗತ್ಯ ಕೌಶಲ್ಯಗಳನ್ನು ರೂಢಿಸಿಕೊಂಡಲ್ಲಿ ಭವಿಷ್ಯ ಉಜ್ವಲವಾಗುತ್ತಿದೆ ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ ರಾಧಾಕೃಷ್ಣ ಶೆಟ್ಟಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಕೋಟೇಶ್ವರದ ವಾಣಿಜ್ಯ ಮತ್ತು ನಿರ್ವಹಣಾ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶ್ರೀ ರಾಮರಾಯ ಆಚಾರ್ಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ವಾಣಿಜ್ಯ ಶಿಕ್ಷಣದ ಮಹತ್ವ ವಿವರಿಸಿದರು. ಐಕ್ಯೂಎಸಿ ಸಂಚಾಲಕ ಶ್ರೀ ನಾಗರಾಜ ಯು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ. ಶೇಖರ್ ಬಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಜಾಹ್ನವಿ ಮತ್ತು ತಂಡ ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟರಾಮ ಭಟ್ ವಂದಿಸಿದರು.ಉಪನ್ಯಾಸಕಿ ವಸುಧಾ ಕಾರ್ಯಕ್ರಮ ನಿರ್ವಹಿಸಿದರು.