ಮಾಯೆಯ ಪ್ರಭಾವಕ್ಕೆ ಒಳಗಾಗಿರುವ ಎಲ್ಲವೂ ಅಜ್ಞಾನದಿಂದ ಮುಸುಕಿರುತ್ತದೆ. ಇಂದ್ರಿಯ ಸುಖಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು ಕೂಡ ಮಾಯೆಯ ಪ್ರಭಾವದಿಂದಲೇ. ದೈಹಿಕವಾದ ಸುಖದಲ್ಲಿ ಮೈಮರೆಯುವ ಮೂಲಕ ನಮ್ಮ ಮೂಲ ಸ್ವಭಾವದ ನಷ್ಟಕ್ಕೆ ನಾವು ಗುರಿಯಾಗುವೆವು. ಆದುದರಿಂದಲೇ ನಾವು ಯಾರು, ಎಲ್ಲಿಂದ ಬಂದೆವು, ನಮ್ಮ ಬದುಕಿನ ಉದ್ದೇಶವೇನು, ಈ ಬದುಕಿನ ಪಯಣವನ್ನು ಮುಗಿಸಿ ನಾವು ಹೋಗುವುದೆಲ್ಲಿಗೆ ಎಂಬಿತ್ಯಾದಿ ಪ್ರಶ್ನೆಗಳನ್ನೇ ಮರೆಯುವೆವು. ಈ ವಿಸ್ಮರಣೆಯಿಂದಾಗಿ ಕಾಮನೆಗಳಿಂದ ತುಂಬಿಕೊಂಡ ಐಹಿಕ ಬದುಕಿಗೆ ಗಟ್ಟಿಯಾಗಿ ಅಂಟಿಕೊಳ್ಳುವೆವು. ಮಾಯೆಯ ಪ್ರಭಾವದಿಂದ ನಾವಿಲ್ಲಿ ಶಾಶ್ವತವೆಂಬ ಭಾವನೆಯನ್ನು ಬೆಳೆಸಿಕೊಂಡು ಐಶ್ವರ್ಯ, ಅಧಿಕಾರ, ಅಂತಸ್ತು, ಕೀರ್ತಿ ಇತ್ಯಾದಿ ಅನಿತ್ಯ ವಸ್ತುಗಳನ್ನು ಅತೀವವಾಗಿ ಮೋಹಿಸುವೆವು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತುಂಬಿಕೊಳ್ಳುವೆವು. ಇತರರಿಗಿಂತ ನಾವು ಎಲ್ಲ ವಿಷಯದಲ್ಲೂ ಭಿನ್ನವಾಗಿದ್ದೇವೆ, ಶ್ರೇಷ್ಠರಾಗಿದ್ದೇವೆ ಎಂಬ ಸುಳ್ಳು ಅಸ್ಮಿತೆಯಲ್ಲಿ ಅಹಂಕಾರದ ಮುದ್ದೆಯಾಗಿ ಬಾಳುವೆವು. ಭೌತಿಕ ಸುಖ ಭೋಗಗಳ ಪ್ರಾಪ್ತಿಗಾಗಿ ದೇವರನ್ನು ಆರಾಧಿಸುವಷ್ಟರ ಮಟ್ಟಿಗೆ ಈ ಜಗತ್ತಿಗೆ ನಮ್ಮನ್ನು ಬಂಧಿಸಿಕೊಳ್ಳುವೆವು. ಅನಿತ್ಯವಾದ ಭೌತಿಕ ಸಂಪತ್ತಿನ ಮದದಲ್ಲಿ ತರತಮದ ಭಾವನೆಯನ್ನು ರೂಢಿಸಿಕೊಂಡು ಹಲವರನ್ನು ಕೀಳಾಗಿ ನಮ್ಮ ಲಾಭಕ್ಕೆ ತಕ್ಕಂತೆ ಕೆಲವರನ್ನು ಮೇಲಾಗಿ ಕಾಣುವೆವು. ಆತ್ಮನಲ್ಲಿ ಪ್ರತಿಷ್ಠಾಪಿತರಾಗಿ ಸಮತ್ವದಲ್ಲಿ ಶಾಂತಿಯನ್ನು ಅರಸುವ ನಮ್ಮ ಮೂಲ ಸ್ವಭಾವವನ್ನು ಮರೆತು ಸ್ವಾರ್ಥಪರ ಬದುಕನ್ನು ನಡೆಸುವೆವು. ಸ್ವಪ್ರತಿಷ್ಠೆ , ಶ್ರೇಷ್ಠತೆಯನ್ನು ಮೆರೆಯಲು ಹವಣಿಸುವೆವು. ಆದರೆ ಇವೆಲ್ಲವೂ ನೀರ ಮೇಲಿನ ಗುಳ್ಳೆಯಂತೆ ಒಂದು ದಿನ ಒಡೆದು ಹೋಗುವುದಂತೂ ನಿಶ್ಚಿತ. ಆಗಲೂ ಅಜ್ಞಾನಿಗಳಾಗಿ ದೇವರನ್ನೂ ಆತನ ಸೃಷ್ಟಿಯನ್ನೂ ಹೀಗಳೆಯುವೆವು ನಾಸ್ತಿಕರಾಗುವೆವ