ನಮ್ಮ ಪಂಚೇಂದ್ರಿಯಗಳ ಮೂಲಕ ನಾವು ಯಾವುದನ್ನು ಅನುಭವಿಸುವೆವೋ ಅದು ಮಾತ್ರವೇ ಸತ್ಯವೆಂದು ತಿಳಿಯುವ ಸ್ವಭಾವ ನಮ್ಮದು. ಪಂಚೇಂದ್ರಿಯಗಳ ಮೂಲಕ ನಾವು ಯಾವುದನ್ನು ಅನುಭವಿಸಲಾರೆವೋ ಅಥವಾ ತಿಳಿಯಲಾರೆವೋ ಅದು ಅಸ್ತಿತ್ವದಲ್ಲೇ ಇಲ್ಲ, ಅದು ಮಿಥ್ಯ ಎಂದು ಭಾವಿಸುವ ಗುಣ ನಮ್ಮದು. ನಮ್ಮ ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮದ ಮೂಲಕ ನಾವು ಏನನ್ನು ಕಾಣುವೆವೋ ಆಘ್ರಾಣಿಸುವೆವೋ ರುಚಿಸುವೆವೋ ಮತ್ತು ಪರಿಗ್ರಹಿಸುವೆವೋ ಮಾತ್ರವೇ ವಾಸ್ತವವೆಂದೂ ಸತ್ಯವೆಂದೂ ಭಾವಿಸುವುದು ನಮ್ಮ ಪಂಚೇಂದ್ರಿಯಗಳ ಪರಿಮಿತಿಗೆ ಹಿಡಿದ ಕನ್ನಡಿಯಾಗಿದೆ. ಇದರಾಚೆಗೆ ನಮ್ಮ ಅನುಭವಕ್ಕೆ ಬಾರದ ಯಾವ ಸಂಗತಿಗಳನ್ನೂ ನಾವು ಸ್ವೀಕರಿಸಲು, ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ದೇವರ ಸಂದರ್ಭದಲ್ಲೂ ನಮ್ಮ ಸಮಸ್ಯೆ ಇದೇ ಆಗಿದೆ. ಕಾಣದ ದೇವರು ಇದ್ದಾನೆಂದು ನಾವು ಒಪ್ಪುವುದಾದರೂ ಹೇಗೆ ಎಂಬ ಸಮಸ್ಯೆ ನಮ್ಮದು. ಹಾಗಾಗಿ ನಮಗೆ ದೇವರಲ್ಲಿ ವಿಶ್ವಾಸ ಏರ್ಪಡುವುದು ಬಹಳ ಕಷ್ಟ. ನಾವೆಲ್ಲರೂ ಮಾತ್ರವಲ್ಲ ಈ ಸಮಗ್ರ ಸೃಷ್ಟಿಯೇ ದೇವರ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರೆ ಅನೇಕರಿಗೆ ನಂಬಿಕೆಯೇ ಬರುವುದಿಲ್ಲ. ದೇವರ ಸೃಷ್ಟಿಯಲ್ಲಿ ಏನೆಲ್ಲ ಇವೆಯೋ ಅವೆಲ್ಲವೂ ನಮ್ಮ ಒಳಗೇ ಇದೆ ಎಂದರೆ ಅದನ್ನೂ ಜನರೇ ಹೆಚ್ಚು ದೇವರ ಅಸ್ತಿತ್ವದಲ್ಲಿ ವಿಶ್ವಾಸ ಮೂಡಲು ನಾವು ನಮ್ಮ ಪಂಚೇಂದ್ರಿಯ ಗಳ ಪರಿಮಿತಿಗಳನ್ನು ದಾಟಲು ಪ್ರಯತ್ನಿಸಬೇಕು. ದೇವರು ಹೇಗಿರಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಉಪನಿಷತ್ತು ವಿವರಣೆ ನೀಡುವುದು ‘ನೇತಿ, ನೇತಿ’ ಎನ್ನುವ ಮೂಲಕ. ನಾವು ಈ ಪ್ರಪಂಚದಲ್ಲಿ ನಮ್ಮ ಕಣ್ಣಿನಿಂದ ನೋಡಿದ, ಕಿವಿಯಿಂದ ಕೇಳಿದ, ಸ್ಪರ್ಶಜ್ಞಾನದಿಂದ ಅನುಭವಿಸಿದ ಯಾವುದೇ ವಸ್ತುವಿನಂತೆ ಆ ದೇವರು ಇಲ್ಲಎನ್ನುವುದೇ ‘ನೇತಿ, ನೇತಿ’ ಎನ್ನುವುದರ ಅರ್ಥ. ಹಾಗಿದ್ದರೆ ಆ ದೇವರು ಹೇಗಿರುವನು? ಅದನ್ನು ಆಲೋಚಿಸಲು ನಾವು ಪಂಚೇಂದ್ರಿಯಗಳ ಪರಿಧಿಯಿಂದ ಹೊರಬಂದು ಅತೀಂದ್ರಿಯ ಜ್ಞಾನದ ಮೊರೆ ಹೋಗಬೇಕು. ಇದೆ ಎಂದು ನಾವು ತಿಳಿಯುವ ಈ ಜಗತ್ತಿನ ಎಲ್ಲೆಗಳನ್ನು ದಾಟಿ ಏನೂ ಇರದ ಕಡೆಯತ್ತ ಪಯಣಿಸಬೇಕು. ಆ ಪ್ರಯಾಣ ನಮ್ಮ ಆತ್ಮನ ಮೂಲಕವೇ ಆಗಬೇಕು. ಅದಕ್ಕೆ ನಾವು ನಮ್ಮನ್ನು ಸಿದ್ಧಗೊಳಿಸಲು ಆತ್ಮಜ್ಞಾನವನ್ನು ಪಡೆಯಬೇಕು.