ಅನೇಕತೆಯಲ್ಲಿ ಅಡಗಿರುವ ಏಕತೆಯನ್ನು ಕಾಣುವುದು ಸುಲಭದ ವಿಷಯವಲ್ಲ, ಅನೇಕತೆಯ ಆಕರ್ಷಣೆಯನ್ನು ಗೆಲ್ಲದೆ ಏಕತೆಯ ಸುವರ್ಣ ರೇಖೆಯನ್ನು ನಾವು ಕಾಣಲಾರೆವು. ಪಂಚೇಂದ್ರಿಯಗಳು ನಮ್ಮನ್ನು ನಿಯಂತ್ರಿಸುವಷ್ಟು ಕಾಲವೂ ನಾವು ಸೃಷ್ಟಿಯ ವೈವಿಧ್ಯವೆಂಬ ಮಾಯೆಯಿಂದ ಹೊರಬರಲಾರೆವು. ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಗೆ ಪಡೆಯುವ ಸಂವೇದನೆಯ ತೀವ್ರತೆಯನ್ನು ನಿಯಂತ್ರಿಸುವುದೇ ಸವಾಲು. ಪಂಚೇಂದ್ರಿಯಗಳಿಂದಾಗಿಯೇ ನಾವು ಭೌತಿಕ ತೀವ್ರವಾಗಿ ನಮ್ಮ ಬದುಕಿನ ಗುರುತರ ಜಗತ್ತಿನಲ್ಲಿ ಇಷ್ಟೊದು ವ್ಯಸ್ತರಾಗಿದ್ದೇವೆ. ಸ್ವಾರ್ಥಪರರೂ ಆಗಿದ್ದೇವೆ. ಆದರೆ ಎಷ್ಟೋ ಜನ್ಮಗಳನ್ನು ದಾಟಿ ದೇವರನ್ನು ಸೇರುವ ಕೊನೆಯ ಹಂತದಲ್ಲಿ ನಾವು ಮಾನವ ಜನ್ಮವನ್ನು ಪಡೆದಿದ್ದೇವೆ ಎಂಬ ಸತ್ಯವನ್ನು ಅರಿಯಲಾರದಷ್ಟು ಮೂಢರಾಗಿದ್ದೇವೆ. ನಮ್ಮ ಮುಂದೆ ಆಕರ್ಷಣೆಗಳಿವೆ ಮತ್ತು ಅವುಗಳಿಗೆ ಸ್ಪಂದಿಸಿ ಸುಖಿಸುವ ಇಂದ್ರಿಯಗಳೂ ಇವೆ ನಿಜ. ಹಾಗೆಂದು ನಾವು ಸುಖಲೋಲುಪತೆಯಲ್ಲಿ ಸದಾಕಾಲ ಮುಳುಗಿರಬೇಕೆಂದು ಅರ್ಥವಲ್ಲ, ಇಂದ್ರಿಯ ಸುಖಗಳನ್ನು ಅನುಭವಿಸುತ್ತಾ ದೇಹ ಪ್ರಜ್ಞೆಯಲ್ಲೇ ಬದುಕುವುದೆಂದರೆ ಮೃಗೀಯವಾಗಿ ಬದುಕುವುದೇ ಆಗಿದೆ. ದೇಹಪ್ರಜ್ಞೆಯನ್ನು ಮೀರಿ ಮೇಲ್ಸ್ತರದಲ್ಲಿ ಬದುಕಲು ನಮ್ಮಲ್ಲಿ ಯೋಚನಾ ಶಕ್ತಿ ಇದೆ. ಬುದ್ಧಿಶಕ್ತಿ ಇದೆ. ಸಹೃದಯತೆಯನ್ನು ಮೆರೆಯಲು ಹೂವಿನಂತಹ ಮನಸ್ಸು, ಕೋಮಲವಾದ ಹೃದಯ ನಮ್ಮಲ್ಲಿದೆ. ಸರಿ-ತಪ್ಪುಗಳನ್ನು, ಪಾಪ-ಪುಣ್ಯಗಳನ್ನು ನಿಷ್ಕರ್ಷೆ ಮಾಡುವ ತಾರ್ಕಿಕ ಶಕ್ತಿ ಇದೆ. ಎಲ್ಲಕ್ಕಿಂತ ಶ್ರೇಷ್ಠವಾದ ಆಧ್ಯಾತ್ಮಿಕ ಪ್ರಭೆ ನಮ್ಮೊಳಗಿದೆ. ಪುಣ್ಯವನ್ನು ಹುಡುಕುತ್ತಾ ಪಾಪದಿಂದ ಪಾರಾಗುವುದು ನಮ್ಮ ಮೂಲ ಸ್ವಭಾವವಾಗಿದೆ. ಸಮತ್ವವೇ ದೇವರು ಎಂಬುದನ್ನು ಕಾಣುವಲ್ಲಿ ಮೋಕ್ಷದ ಹಾದಿ ತೆರೆದುಕೊಳ್ಳುತ್ತದೆ. ಆ ಮೋಕ್ಷವನ್ನು ಸಂಪಾದಿಸುವ ‘ಯಜ್ಞವನ್ನು ನಾವು ಬದುಕಿನಲ್ಲಿ ಕೈಗೊಳ್ಳಬೇಕೆಂದೇ ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ.