ಕುಂದಾಪುರ : ನಾನು ಕುಂದಾಪುರಕ್ಕೆ ಬಂದ ಮೊದಲಲ್ಲಿ ಹಿಂದಿ ಭಾಷೆ ಕಲಿಯಬೇಕೆಂದು ಬಯಸಿದ್ದೆ. ಆದರೆ ಇಲ್ಲಿ ಹಿಂದಿಗಿಂತ ಕನ್ನಡದ ಅಗತ್ಯತೆ ಹೆಚ್ಚಿದ್ದ ಕಾರಣ ಕನ್ನಡವನ್ನು ಕಲಿಯಲು ಮನಸ್ಸು ಮಾಡಿದೆ ಎಂದು ನೆದರ್ ಲ್ಯಾಂಡಿನಿಂದ ಬಂದು ಕಳೆದ 15 ವರ್ಷಗಳಿಂದ ಮಾನಸಜ್ಯೋತಿ ವಿಶೇಷ ಚೇತನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾರ್ಜೆ ವ್ಯಾನ್ ಡೆನ್ ಬ್ರಾಂಡ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ಕನ್ನಡ ಕಲಿತದ್ದು ಅವರಿಗಷ್ಟೇ ಹೆಮ್ಮೆಯಲ್ಲ ನಮಗೂ ಹೆಮ್ಮೆ.ಕನ್ನಡದ ಏಳಿಗೆಗಾಗಿ ಕೊಡುಗೆ ನೀಡಿದವರಲ್ಲಿ ವಿದೇಶಿಯರ ಪಾತ್ರ ಬಹಳಷ್ಟಿದೆ ಎಂದರು ಬಳಿಕೆ ಅವರು ರಚಿಸಿದ ಕವನವನ್ನು ಓದಿ ಜನರನ್ನು ರಂಜಿಸಿದರು.ಈ ಸಂದರ್ಭದಲ್ಲಿ ಗೀತಗಾಯನ ತಂಡದ ಸದಸ್ಯರಿಂದ ನಾಡಗೀತೆ ಹಾಗೂ ಕನ್ನಡ ನುಡಿಯ ಬಗೆಗಿನ ಗೌರವವನ್ನು ಹೆಚ್ಚಿಸುವ ಹಿರಿಯ ಸಾಹಿತಿಗಳು ಬರೆದ ಗೀತೆಗಳನ್ನು ಹಾಡಲಾಯಿತು.
ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್, ರೋಟರಿ ಸದಸ್ಯ ರವಿರಾಜ್ ಶೆಟ್ಟಿ ಶೋಭಾ ಮಧ್ಯಸ್ಥ ಹೆಮ್ಮಾಡಿಯ ಜನತಾ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಉಪಸ್ಥಿತರಿದ್ದರು.ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿ, ತ್ರಿವಿಕ್ರಮ ಪೈ ವಂದಿಸಿದರು.