Home » ಬದುಕಿನ ಆಕರ್ಷಣೆ
 

ಬದುಕಿನ ಆಕರ್ಷಣೆ

by Kundapur Xpress
Spread the love

ಬದುಕಿನ ನಿಜವಾದ ಸುಖ, ಸಂತೋಷ, ಶಾಂತಿ ಇರುವುದು ಭೋಗದಲ್ಲಿ ಅಲ್ಲವೇ ಅಲ್ಲ ತ್ಯಾಗದಲ್ಲಿ ಎನ್ನುವ ಸತ್ಯವನ್ನು ನಾವು ಅರಿತಿರುವುದು ಅಗತ್ಯ. ಆಸೆಯನ್ನು ತ್ಯಜಿಸುವುದರಿಂದ ಸುಖ, ಸಂತೋಷ, ಶಾಂತಿ ಲಭಿಸುವುದು. ಆಸೆಯನ್ನು ತ್ಯಜಿಸಬೇಕಿದ್ದರೆ ನಮ್ಮ ಮನಸ್ಸಿನ ಮೇಲೆ ನಮಗೆ ಪೂರ್ಣವಾದ ಹತೋಟಿ ಇರುವುದು ಅಗತ್ಯ. ಇಂದ್ರಿಯ ಸುಖಗಳನ್ನು ಸದಾ ಬಯಸುತ್ತಲೇ ಇರುವುದು ದೇಹದ ಸ್ವಭಾವ. ಆ ಬಯಕೆಗೆ ಸ್ಪಂದಿಸುವ ಸೂಕ್ಷ್ಮ ಭಾವನೆಗಳು ವ್ಯಕ್ತವಾಗುವುದು ಮನಸ್ಸಿನಲ್ಲಿ, ಆದುದರಿಂದಲೇ ಮನಸ್ಸು ಹೆಚ್ಚು ಭಾವನಾತ್ಮಕವಾಗಿರುವುದು. ದೇಹವು ಬಯಸುವ ಸುಖಾನಂದದ ಬ್ಲೂಪ್ರಿಂಟ್ ಮೊತ್ತ ಮೊದಲು ಮನಸ್ಸಿನಲ್ಲಿ ರೂಪು ತಳೆಯುವುದು. ದೇಹದ ಬಯಕೆಗೆ ತಕ್ಕಂತೆ ಅದು ಕಾರ್ಯಾಚರಿಸುವುದು. ಸರಿ-ತಪ್ಪು, ಒಳಿತು-ಕೆಡುಕುಗಳನ್ನು ಯೋಚಿಸುವ ವ್ಯವಧಾನವು ಸೂಚ್ಯವಾಗಿ ಅದಕ್ಕಿಲ್ಲ. ಆ ವ್ಯವಧಾನವಿರುವುದು ಬುದ್ದಿಗೆ, ಬುದ್ದಿಯು ತರ್ಕಶಕ್ತಿಯನ್ನು ಹೊಂದಿರುವುದರಿಂದಲೇ ಅದು ಪಾಪ-ಪುಣ್ಯಗಳ, ಒಳಿತು-ಕೆಡುಕುಗಳ ಪರಿಣಾಮವನ್ನು ಮುಂಚಿತವಾಗಿಯೇ ತಿಳಿಸುವ ಕೆಲಸವನ್ನು ಮಾಡುತ್ತದೆ. ಆದರೆ ಇಷ್ಟು ಮಾಡಲು ಬುದ್ಧಿಯು ಭಾವನೆಯನ್ನು ಗೆಲ್ಲಬೇಕು. ಇಂದ್ರಿಯಗಳ ಮೇಲಿನ ಮಾಯೆಯ ಪ್ರಭಾವದ ತೀವ್ರತೆಯಲ್ಲೇ ಮನಸ್ಸು ಮತ್ತು ಬುದ್ಧಿಯ ನಡುವೆ ಸಂಘರ್ಷ ಏರ್ಪಟ್ಟಿರುತ್ತದೆ. ಈ ಸಂಘರ್ಷದಲ್ಲಿ ಬುದ್ಧಿಯು ಗೆದ್ದು ಬರಲು ಅದಕ್ಕೆ ಆತ್ಮಜ್ಞಾನದ ಬೆಳಕು ಬೇಕು. ಆ ಬೆಳಕಿನಿಂದಲೇ ನಮ್ಮ ಬಾಳು ಒಳಗೂ ಹೊರಗೂ ಬೆಳಗುವುದು. ಮನಸ್ಸು ಮರ್ಕಟನಂತೆ ವರ್ತಿಸದಿರಲು, ಅದರ ಮೇಲೆ ಬುದ್ಧಿಯ ಕಡಿವಾಣವಿರಲು ಆತ್ಮಶಕ್ತಿಯಿಂದ ಮಾತ್ರ ಸಾಧ್ಯ, ಆತ್ಮಜ್ಞಾನದ ಬೆಳಕಿಲ್ಲದೆಡೆ ನಾವು ಹೊರ ಜಗತ್ತಿನಲ್ಲಿ ಕಣ್ಣಿದ್ದೂ ಕುರುಡರಂತೆ ಬಾಳುವೆವು ಪ್ರಖರ ಬೆಳಕಿನ ಆಕರ್ಷಣೆಯಲ್ಲಿ ಅದರ ಸುತ್ತ ತಿರುಗುತ್ತಾ ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಹಾತೆಯ ಹಾಗೆ ನಮ್ಮ ಬದುಕು ಕೊನೆಗೊಳ್ಳುವುದು.

   

Related Articles

error: Content is protected !!