ಬದುಕಿನಲ್ಲಿ ನಾವೆಲ್ಲರೂ ಬಯಸುವುದು ಏನನ್ನು? ಸಂತೋಷದಿಂದ ಇರುವುದನ್ನು ಶಾಂತಿಯಿಂದ ಇರುವುದನ್ನು ಯಾವುದೇ ರೀತಿಯ ಜಂಜಾಟಗಳಿಲ್ಲದೆ, ತಲೆಬಿಸಿಗಳಿಲ್ಲದೆ, ಸಮಸ್ಯೆಗಳಿಲ್ಲದೆ, ಗೋಜಲು-ಸಂಕಷ್ಟಗಳಿಲ್ಲದೆ ಜೀವನ ಸಾಗುತ್ತಿರಬೇಕು ಎಂದು ಎಲ್ಲರೂ ಬಯಸುತ್ತಾರೆ ಹಾಗೆ ಬಯಸುವುದು ಕೂಡ ಸಹಜವೇ ಅದರಲ್ಲಿ ತಪ್ಪೇನೂ ಇಲ್ಲ ಆದರೆ ಬದುಕಿನಲ್ಲಿ ನಾವು ಏನನ್ನು ಬಯಸುವೆವೋ ಅದಕ್ಕೆ ಸಂಪೂರ್ಣ ವಿರುದ್ಧವಾಗಿ ಕಾರ್ಯ ನಿರತರಾಗುತ್ತೇವೆ! ನಾವು ಸುಖ-ಸಂತೋಷದಿಂದ ಬದುಕಬೇಕು ಎಂದು ಬಯಸುವಾಗ ಇತರರು ಕೂಡ ಅದನ್ನೇ ಅಪೇಕ್ಷಿಸುತ್ತಾರೆ ಎಂಬ ಪ್ರಜ್ಞೆ ನಮ್ಮಲ್ಲಿದ್ದರೆ ನಾವು ಇತರರ ಸುಖ ಸಂತೋಷಕ್ಕೆ ಎಂದೂ ಅಡ್ಡಿ ಬರುವುದಿಲ್ಲ. ಇತರರನ್ನು ದ್ವೇಷಿಸುವುದಿಲ್ಲ, ಅನ್ಯರ ಉನ್ನತಿಯ ಬಗ್ಗೆ ಅಸೂಯೆ ತಾಳುವುದಿಲ್ಲ. ಸ್ವಂತದ ಬಗ್ಗೆ ಅಹಂಕಾರವನ್ನು ಹೊಂದಿರುವುದಿಲ್ಲ. ಆದರೆ ನಮ್ಮ ದ್ವಂದ್ವ ಮನೋಭಾವ. ನಾವು ಸುಖ-ಸಂತೋಷದಿಂದ ಬದುಕಬೇಕು ಎಂದು ಬಯಸುವಾಗ ನಮ್ಮ ಗುರಿಯನ್ನು ನಾವು ನಮಗಷ್ಟೇ ಸೀಮಿತಗೊಳಿಸುತ್ತೇವೆ.ಇದನ್ನೇ ಸ್ವಾರ್ಥ ಎನ್ನುವುದು, ಸ್ವಾರ್ಥದಲ್ಲಿ ಕಾಮ-ಕ್ರೋಧಾದಿಗಳೆಲ್ಲವೂ ಒಳಗೊಳ್ಳುವುದರಿಂದ ನಾವು ಅನ್ಯರನ್ನು ದ್ವೇಷಿಸುವುದು, ದೂಷಿಸುವುದು, ಅವರ ಬಗ್ಗೆ ಅಸೂಯೆಪಡುವುದು ಎಲ್ಲವೂ ತೀವ್ರವಾಗಿ ವ್ಯಕ್ತವಾಗುತ್ತದೆ. ಹಾಗಿರುವಲ್ಲಿ ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸುವ ನಿಷ್ಕಾಮ ಕರ್ಮಯೋಗಿಗಳಾಗಲು ನಮಗೆ ಸಾಧ್ಯವಾಗುವುದಿಲ್ಲ. ನಿಷ್ಕಾಮ ಕರ್ಮಯೋಗಿಗಳಾಗಲು ನಾವು ಷಡೈರಿಗಳ ಬಿಗಿ ಬಂಧನದಿಂದ ಪಾರಾಗಿ ಹೊರಬರಬೇಕು. ದ್ವೇಷ ಅಸೂಯೆಗಳಿಂದ ಮುಕ್ತರಾಗಬೇಕು. ಬದುಕಿನಲ್ಲಿ ಅನಿತ್ಯವಾದ ಏನನ್ನೂ ಅಪೇಕ್ಷೆ ಪಡದ ಸ್ಥಿರ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಅದು ಸಾಧ್ಯವಾಗಬೇಕಾದರೆ ಮನಸ್ಸಿನ ಸಮತ್ವವನ್ನು ಹೊಂದುವ ದಿಶೆಯಲ್ಲಿ ನಾವು ಪ್ರಯತ್ನಶೀಲ ರಾಗಬೇಕು. ನಿರ್ವಿಕಾರ ಚಿತ್ತದಿಂದ ಸುಖ-ದುಃಖಕ್ಕೆ ಒಡ್ಡಿಕೊಳ್ಳಬೇಕು.