ಬಾಹ್ಯ ಜಗತ್ತು ನಮ್ಮನ್ನು ಇಷ್ಟೊಂದು ತೀವ್ರವಾಗಿ ಆಕರ್ಷಿಸಲು ಮುಖ್ಯ ಕಾರಣ ಪ್ರಕೃತಿಯಲ್ಲಿ ಹುದುಗಿರುವ ಸೌಂದರ್ಯ ಎಂದು ನಾವು ಭಾವಿಸುತ್ತೇವೆ. ಹೊರಗಿನ ಆಕರ್ಷಣೆಗಳಿಗೆ ನಮ್ಮ ಪಂಚೇಂದ್ರಿಯಗಳು ಸ್ಪಂದಿಸುವುದು ಅವುಗಳ ಸ್ವಭಾವ. ಪಂಚೇಂದ್ರಿಯಗಳ ಈ ಸಂವೇದನೆಯಿಂದಾಗಿ ಸೌಂದರ್ಯವು ನಾವು ನೋಡುವ ವಸ್ತುವಿನಲ್ಲಿದೆಯೋ ಅಥವಾ ಅದನ್ನು ನೋಡುವ ನಮ್ಮ ಕಣ್ಣುಗಳಲ್ಲಿ ಅಡಗಿದೆಯೋ ಎಂಬ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಇಂಗ್ಲಿಷಿನಲ್ಲಿ ಒಂದು ಮಾತಿದೆ: ಬ್ಯೂಟಿ ಲೈಸ್ ಇನ್ ದಿ ಬಿಹೋಲ್ಡರ್ ಐಸ್. ಸೌಂದರ್ಯವು ವಸ್ತುವಿನಲ್ಲಿ ಇಲ್ಲ; ಅದನ್ನು ನೋಡುವ ವ್ಯಕ್ತಿಯ ಕಣ್ಣುಗಳಲ್ಲಿ ಇದೆ ಎಂಬ ನಂಬಿಕೆ ಪಾಶ್ಚಾತ್ಯ ಚಿಂತನೆಯಲ್ಲಿ ಅಡಕವಾಗಿದೆ. ವಸ್ತುವಿನಲ್ಲಿ ಇದೆ ಎಂದು ನಾವು ತಿಳಿಯುವ ಸೌಂದರ್ಯವು ಅದನ್ನು ಕಾಣುವ ಎಲ್ಲರಲ್ಲಿಯೂ ಒಂದೇ ರೀತಿಯ ಭಾವನೆಯನ್ನು ಹುಟ್ಟಿಸಬೇಕೆಂದೇನೂ ಇಲ್ಲ. ಕೆಲವರಲ್ಲಿ ಅದು ಪ್ರೀತಿಯನ್ನು ಹುಟ್ಟಿಸಬಹುದು. ಕೆಲವರಲ್ಲಿ ಅದು ಮೋಹವನ್ನು, ಮತ್ತೆ ಕೆಲವರಲ್ಲಿ ಅದು ಲೋಭವನ್ನು ಹುಟ್ಟಿಸಬಹುದು. ಆ ಸೌಂದರ್ಯವನ್ನು ತಾನೊಬ್ಬನೇ ಆನಂದಿಸಬೇಕು, ಇತರರಿಗೆ ಅದು ಸಿಗಬಾರದು ಎಂಬ ಸ್ವಾರ್ಥಭಾವನೆಯನ್ನು ಅದು ಕೆದಕಬಹುದು. ವಸ್ತುವಿನಲ್ಲಿರುವ ಸೌಂದರ್ಯವು ಅದನ್ನು ಕಾಣುವ ವ್ಯಕ್ತಿಯಲ್ಲಿ ಭೋಗ ಪ್ರಜ್ಞೆಯನ್ನು ಹುಟ್ಟಿಸಿದಲ್ಲಿ ಅಷ್ಟರಮಟ್ಟಿಗೆ ಆ ಮನಸ್ಸನ್ನು ಅಜ್ಞಾನವು ಆವರಿಸಿಕೊಂಡಿದೆ ಎಂದರ್ಥ. ಸಮತ್ವದಲ್ಲಿ ನೆಲೆಗೊಂಡಿರುವ ಮನಸ್ಸಿಗೆ ಮಾತ್ರವೇ ನಿರ್ಮೋಹದಿಂದ ಸೌಂದರ್ಯವನ್ನು ಕಾಣಲು ಸಾಧ್ಯ. ಅಂತಹ ಸೌಂದರ್ಯವು ಆತನಲ್ಲಿ ಲೋಭ, ಮೋಹ, ಮದ, ಮತ್ಸರ, ದ್ವೇಷವನ್ನು ಹುಟ್ಟಿಸದು. ಪ್ರಕೃತಿಯ ಎಲ್ಲ ವಸ್ತುಗಳಲ್ಲಿ, ಸಮಸ್ತ ಜೀವ ಸಂಕುಲದಲ್ಲಿ ಅಡಗಿರುವ ಸೌಂದರ್ಯವನ್ನು ಕಾಣಲು ಆತನಿಗೆ ಸಾಧ್ಯವಾಗುವುದು. ನಿರ್ಮೋಹದಿಂದ ಆ ಸೌಂದರ್ಯವನ್ನು ಕಾಣಲು ಸಾಧ್ಯವಾಗುವಾತನಿಗೆ ಪ್ರಪಂಚವನ್ನು ಪ್ರೀತಿಸುವುದು ಸುಲಭ