ದೇಹಪ್ರಜ್ಞೆಯ ತೀವ್ರತೆಯಿಂದಾಗಿಯೇ ನಾವು, ನಮ್ಮವರು, ಬಂಧು-ಬಳಗ, ಮಕ್ಕಳು-ಮರಿ ಎಂದೆಲ್ಲ ಐಹಿಕ ಜಗತ್ತಿಗೆ ನಮ್ಮನ್ನು ನಾವು ಬಿಗಿಯಾಗಿ ಬಂಧಿಸಿಕೊಂಡಿರುವೆವು. ಆತ್ಮನ ಕುರಿತಾಗಿ ಯೋಚಿಸತೊಡಗಿದರೆ ಅಂತಹದ್ದೇನಾದರೂ ನಿಜಕ್ಕೂ ಇದೆಯೇ ಎಂಬ ಬಗ್ಗೆ ನಾವು ಸಂದೇಹಪಟ್ಟು ಕೊಳ್ಳುವೆವು. ಆತ್ಮನನ್ನು ನಾವು ಕಾಣಲಾರೆವು. ಆತ್ಮವೆಂದರೆ ಹೇಗಿದ್ದೀತು ಎಂದು ಯೋಚಿಸಲಾರೆವು. ಸಾಮಾನ್ಯರಲ್ಲಿ ಸಾಮಾನ್ಯರಾದ ನಮಗೆ ಆತ್ಮನ ಇರುವಿಕೆಯ ಬಗ್ಗೆ ಮಾತ್ರ ಯಾವ ಅನುಭವವೂ ಉಂಟಾಗದು. ಹಾಗಿರುವಾಗ ಆತ್ಮಜ್ಞಾನದ ಕುರಿತು ನಾವೇನು ಅರಿಯಬಲ್ಲೆವು ? ಇಂತಹ ಪ್ರಶ್ನೆ ನಮ್ಮನ್ನು ಕಾಡುವುದು ಸಹಜವೇ. ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆ ನಮ್ಮನ್ನು ಆಗೀಗ ಕಾಡುವಂತೆ ಆತ್ಮನ ಅಸ್ತಿತ್ವದ ಕುರಿತಾದ ಪ್ರಶ್ನೆಯೂ ಕಾಡುತ್ತಲೇ ಇರುತ್ತದೆ. ಆದರೆ ಸೂಕ್ಷ್ಮವಾಗಿ ಯೋಚಿಸಿ ನೋಡಿದರೆ ನಮ್ಮ ದೈನಂದಿನ ಕಾಯಕದಲ್ಲಿ ನಾವು ತೋರುವ ಶ್ರದ್ಧೆ, ಕೈಗೊಳ್ಳುವ ಕಠಿನ ಪರಿಶ್ರಮ ಹಾಗೂ ಕಾರ್ಯ ಕೈಗೂಡುವುದೆಂಬ ವಿಶ್ವಾಸದಲ್ಲಿ ಅದ್ಭುತ ಚೈತನ್ಯವನ್ನು ತುಂಬುವ ಆತ್ಮಶಕ್ತಿಯನ್ನು ನಾವು ಅನುಭವಿಸುತ್ತಿರುತ್ತೇವೆ. ಮಹಾತ್ಮಾ ಗಾಂಧೀಜಿಯವರು ಹೇಳುವಂತೆ ಆತ್ಮಶಕ್ತಿ ಎಂದರೆ ಮನಸ್ಸು, ಬುದ್ಧಿ – ಇವುಗಳಿಗೆ ಚೇತನ ಕೊಡುವ ಸೂಕ್ಷ್ಮವಾದ ಒಂದು ಶಕ್ತಿ. ಆ ಶಕ್ತಿಯನ್ನು ನಾವು ಕಾಣಲಾರೆವು. ಎಂದ ಮಾತ್ರಕ್ಕೆ ಅದು ಇದ್ದೀತೆ ಎಂಬ ಸಂಶಯವನ್ನು ತಳೆದರೆ ಹೇಗೆ ? ಪರಮಾತ್ಮನ ಅಂಶವಾಗಿರುವ ಜೀವಾತ್ಮನು ಇರುವಷ್ಟು ಕಾಲವೂ ಈ ದೇಹ, ಮನಸ್ಸು, ಬುದ್ಧಿಯಲ್ಲಿ ಚೈತನ್ಯವೆಂಬ ಸೂಕ್ಷ್ಮವಾದ ಅದ್ಭುತ ಮಾಂತ್ರಿಕ ಶಕ್ತಿಯೊಂದು ಕೆಲಸ ಮಾಡುತ್ತಲೇ ಇರುತ್ತದೆ. ಆ ಚೈತನ್ಯರೂಪೀ ದೈವಶಕ್ತಿಯನ್ನು ಅನುಭವಿಸಲು ಸಾಧ್ಯವಾದರೆ ಆತ್ಮನ ಅಸ್ತಿತ್ವದ ಬಗ್ಗೆ ಮೂಡುವ ಪ್ರಶ್ನೆಯೇ ಇಲ್ಲ. ಆತ್ಮನ ಅಸ್ತಿತ್ವದ ಕುರಿತಾದ ಸಂದೇಹ ನಮ್ಮಲ್ಲಿ ನಾಶವಾದರೆ ಮತ್ತೆ ನಮ್ಮೊಳಗಿನ ದೇವರನ್ನು ಕಾಣಲು ಕಷ್ಟವಿಲ್ಲ. ಜೀವಾತ್ಮನಾಗಿ ನಮ್ಮಲ್ಲಿರುವ ದೇವರ ಅಂಶವನ್ನು ಕಾಣುವಲ್ಲೇ ಮೋಕ್ಷದ ಮಾರ್ಗವಿದೆ.