ಜ್ಞಾನದ ಮೂಲಕ ನಾಶವಾಗಿ ಹೋಗುವ ನಮ್ಮಲ್ಲಿನ ಸಂಶಯಗಳು ಯಾವುವೆಂದರೆ ನಾವು ದೇವರ ಅಂಶವೇ ಆಗಿದ್ದೇವೆ ಎಂಬ ತಿಳಿವಳಿಕೆ. ‘ನಾನೆಂದರೆ ಈ ನನ್ನ ದೇಹ ಅಲ್ಲವೇ ಅಲ್ಲ. ಈ ದೇಹವು ಪ್ರಾಪ್ತವಾಗಿರುವುದು ಪ್ರಾರಬ್ಧ ಕರ್ಮಗಳಿಂದ, ಪಂಚಭೂತಗಳಿಗೆ ಸೇರಿರುವ ಈ ದೇಹವು ಮತ್ತೆ ಸೇರುವುದು ಪಂಚಭೂತಗಳನ್ನೇ. ಆದರೆ ‘ಈ ದೇಹದೊಳಗೆ ಚೈತನ್ಯರೂಪಿಯಾಗಿರುವ ಜೀವಾತ್ಮನು ಪರಮಾತ್ಮನ ಅಂಶವೇ ಆಗಿದ್ದು ಪರಮಾತ್ಮನನ್ನು ಮರಳಿ ಸೇರುವುದೇ ಈ ಜೀವಾತ್ಮನ ಗುರಿಯಾಗಿದೆ’ ಎಂಬ ತಿಳಿವಳಿಕೆ ಮೂಡುವುದೇ ಆತ್ಮಜ್ಞಾನದ ಬೆಳಕಿನಲ್ಲಿ, ಈ ತಿಳಿವಳಿಕೆ ಮೂಡದಿದ್ದರೆ ನಾವು ಈ ಐಹಿಕ ಪ್ರಪಂಚದಲ್ಲಿ ಕೇವಲ ದೈಹಿಕವಾಗಿ ಮಾತ್ರವೇ ಬದುಕುವೆವು. ಪಂಚೇಂದ್ರಿಯಗಳ ಪಾರಮ್ಯದಲ್ಲಿ ಭ್ರಮಾಧೀನರಾಗಿ ಜೀವಿಸುವೆವು. ನಮ್ಮೆಲ್ಲ ಕರ್ಮಗಳ ಕರ್ತೃ ನಾವೇ ಎಂಬ ಭಾವನೆಯಲ್ಲಿ ಕರ್ಮಫಲವನ್ನು ಬಯಸುತ್ತಾ ಸ್ವಾರ್ಥಪರರಾಗಿ, ಅಹಂಕಾರಿಗಳಾಗಿ ಬಾಳುವೆವು. ಪರಿಣಾಮವಾಗಿ ಹುಟ್ಟು-ಸಾವಿನ ಚಕ್ರದಲ್ಲಿ ನಿರಂತರವಾಗಿ ಸಿಲುಕಿಕೊಳ್ಳುವೆವು. ನಾವು ದೇವರ ಅಂಶವಾಗಿದ್ದೇವೆ ಎಂಬ ಅರಿವಿನಿಂದ ಮಾತ್ರವೇ ದೇವರನ್ನು ಸೇರಬೇಕೆಂಬ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಲು ಸಾಧ್ಯ. ಆದರೆ ಹಾಗೆ ಮಾಡಲು ನಿಷ್ಕಾಮ ಕರ್ಮಯೋಗಿಗಳಾಗುವುದು ಅಗತ್ಯ. ಕರ್ಮದಲ್ಲಿ ಆಸಕ್ತರಾಗುತ್ತಾ ಅದರ ಫಲದಲ್ಲಿ ಮಾತ್ರ ಯಾವುದೇ ಆಸಕ್ತಿಯನ್ನು ಹೊಂದದೇ ನಿರ್ಮೋಹದ ಭಾವವನ್ನು ಬೆಳೆಸಿಕೊಂಡು ದೇವರ ಪ್ರೀತ್ಯರ್ಥವಾಗಿ ನಮ್ಮ ಸಮಸ್ತ ಕರ್ತವ್ಯಗಳನ್ನು ನಿರ್ವಹಿಸಿದರೆ ಬದುಕಿನಲ್ಲಿ ಸುಖ-ಶಾಂತಿ-ಸಮಾಧಾನವನ್ನು ಪಡೆಯಲು ಸಾಧ್ಯ. ಈ ಸೃಷ್ಟಿಯ ಸಮಸ್ತ ಜೀವಸಂಕುಲ ದೇವರ ಅಂಶದಿಂದಲೇ ಕೂಡಿರುತ್ತದೆ. ಅವು ಮತ್ತೆ ಹೋಗಿ ಸೇರುವುದೂ ದೇವರನ್ನೇ ಎಂಬ ಆಧ್ಯಾತ್ಮಿಕ ಬೆಳಕನ್ನು ನಾವು ನಮ್ಮಲ್ಲಿ ಕಾಣಲು ಪ್ರಯತ್ನಿಸಿದರೆ ಯಾವುದೇ ಹುಟ್ಟು-ಸಾವು ನಮ್ಮಲ್ಲಿ ಭಾವವಿಕಾರವನ್ನು ಉಂಟು ಮಾಡದು ಎಂಬ ಸಂದೇಶವನ್ನು ಗೀತೆಯು ನೀಡುತ್ತದೆ