ಕಾಲಗಣನೆಗೆ ಒಳಪಟ್ಟು ಅಸ್ತಿತ್ವಕ್ಕೆ ಬರುವ ಎಲ್ಲವೂ ಕಾಲದ ಚೌಕಟ್ಟಿನೊಳಗೇ ಅಂತ್ಯವನ್ನು ಕಾಣುವುದು ಕಾಲನಿಯಮ. ನಮ್ಮ ಹುಟ್ಟು ಮತ್ತು ಸಾವು ಕೂಡ ಇದೇ ನಿಯಮಕ್ಕೆ ಒಳಗಾಗಿದೆ. ನಮ್ಮ ದೇಹದ ಹುಟ್ಟು ಇಂತಹ ವರ್ಷದಲ್ಲಿ ಇಂತಹ ದಿನದಂದು ಇಂತಿಷ್ಟು ಹೊತ್ತಿನಲ್ಲಿ ಆಯಿತು ಎಂಬ ಕಾಲಗಣನೆಗೆ ಒಳಪಟ್ಟಿದೆ. ಹಾಗೆಯೇ ಅದರ ಸಾವು ಇಂತಹ ವರ್ಷದಲ್ಲಿ ಇಂತಹ ದಿನದಂದು ಇಂತಿಷ್ಟು ಹೊತ್ತಿಗೆ ಆಯಿತೆಂದು ಮುಂದೆ ದಾಖಲಾಗುವುದು. ದೇಹದ ಮೂಲಕ ನಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವಾಗ ನಮ್ಮ ದೇಹಕ್ಕೆ ಆಗಿರುವ ವಯಸ್ಸನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಕಾರಣ ದಿನದಿಂದ ದಿನಕ್ಕೆ ನಮ್ಮ ದೇಹದ ಪಯಣ ನಿಶ್ಚಿತವಾಗಿಯೂ ಸಾವಿನೆಡೆಗೆ ಎಂಬ ಅರಿವು ನಮ್ಮಲ್ಲಿರುವುದೇ ಆಗಿದೆ. ಆದರೆ ದೇಹಕ್ಕೆ ಎದುರಾಗುವ ಮರಣವನ್ನು ನಮ್ಮಲ್ಲಿನ ಅಜ್ಞಾನದ ಫಲವಾಗಿ ನಾವು ಆತ್ಮನಿಗೆ ಒದಗುವ ಸಾವೆಂದೇ ಬಗೆಯುತ್ತೇವೆ. ಆತ್ಮನಿಗೆ ಸಾವೆಂಬುದಿಲ್ಲ. ಅದು ಅಜರಾಮರವಾದುದು. ಸಾವೆಂದರೆ ಹಳೆಯ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಟ್ಟುಕೊಳ್ಳುವ ಹಾಗೆ ಜೀರ್ಣಗೊಂಡ ದೇಹವನ್ನು ಆತ್ಮವು ತ್ಯಜಿಸಿ ಹೊಸದನ್ನು ಪಡೆಯುವ ಹಾಗೆ ಕ್ಷಣಭಂಗುರವಾದ ಐಹಿಕ ಸುಖಭೋಗಕ್ಕೆ ನಾವು ಅಂಟಿ ಕೊಂಡಿರುವುದರಿಂದಲೇ ಸಾವಿನ ಕಲ್ಪನೆ ನಮ್ಮಲ್ಲಿ ಭಯಕ್ಕೆ ಕಾರಣವಾಗಿದೆ. ನಶ್ವರವಾದ ದೇಹದಿಂದಲೇ ನಮ್ಮ ಐಡೆಂಟಿಟಿ (ಅಸ್ಥಿತೆ)ಯನ್ನು ನಾವು ಗುರುತಿಸಿಕೊಳ್ಳುವುದರಿಂದ ‘ಮರಣದೊಂದಿಗೆ ನನ್ನದು ಇಲ್ಲಿ ಎಲ್ಲವೂ ಮುಗಿದು ಹೋಗುವುದಲ್ಲ’ ಎಂಬ ಭಯವನ್ನು ಬದುಕಿನ ಉದ್ದಕ್ಕೂ ಬೆಳೆಸಿಕೊಳ್ಳುತ್ತೇವೆ. ದೇಹದ ಮೂಲಕ ಮಾತ್ರವೇ ನಮ್ಮ ಅಸ್ತಿತ್ವವನ್ನು ಕಾಣುವಲ್ಲಿ ಈ ಸಮಸ್ಯೆ, ಭಯ ನಮ್ಮನ್ನು ಕಾಡುವುದು ಸಹಜವೇ. ‘ನಾನೆಂದರೆ ದೇಹವಲ್ಲ, ಆತ್ಮ’ ಎಂಬ ಅರಿವನ್ನು ಆತ್ಮಜ್ಞಾನದ ಬೆಳಕಲ್ಲಿ ಕಾಣಲು ಸಾಧ್ಯವಾದಾಗ ದೇಹದ ಹುಟ್ಟು-ಸಾವು ನಮ್ಮನ್ನು ಗೊಂದಲಕ್ಕೆ, ದುಃಖಕ್ಕೆ ಗುರಿಮಾಡುವುದಿಲ್ಲ