ಕುಂದಾಪುರ : ಕೋಟೇಶ್ವರದ ಕೊಡಿಹಬ್ಬ ಇಲ್ಲಿಗೆ ಮಾತ್ರ ಸೀಮಿತವಲ್ಲ. ಇದು ಇಡೀ ಕರಾವಳಿಯ ದೊಡ್ಡ ಉತ್ಸವ. ಎಲ್ಲರಲ್ಲೂ ಹೊಸ ಉತ್ಸಾಹ ತುಂಬುವ ಕೊಡಿಹಬ್ಬ ಎಲ್ಲೆಡೆ ಒಳ್ಳೆಯ ಸಂದೇಶ ಸಾರುತ್ತದೆ. ದೇವಾಲಯದ ಆಡಳಿತ ಸಮಿತಿಗಳೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ, ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಸಮಿತಿಗಳು ಬದಲಾದರೂ ಒಳ್ಳೆಯ ಉದ್ದೇಶ ಬದಲಾಗುವುದಿಲ್ಲ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳದ ಐತಿಹಾಸಿಕ ಕೊಡಿಹಬ್ಬದ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಳ ರಂಗ ಮಂಟಪದಲ್ಲಿ ಗುರುವಾರ ರಾತ್ರಿ ಉದ್ಘಾಟಿಸಿ ಅವರು ಶುಭ ಹಾರೈಸಿದರು.
ವೇದಿಕೆಯಲ್ಲಿ ಬಿಡುಗಡೆಗೊಂಡ ಮಂಜುನಾಥ ಶೇರೆಗಾರ್ ವಿರಚಿತ “ಶ್ರೀ ಕೋಟಿಲಿಂಗೇಶ್ವರ ಮಹಾತ್ಮೆ” ಯಕ್ಷಗಾನ ಪ್ರಸಂಗಕ್ಕೆ ಶುಭ ಹಾರೈಸಿದ ಅವರು, ಈ ಗಂಡು ಕಲೆಯ ಮೂಲಕ ಕೋಟೇಶ್ವರದ ಮಹಿಮೆ ಜಗದಗಲಕ್ಕೂ ಪಸರಿಸುವಂತಾಗಲಿ ಎಂದು ಪ್ರಸಂಗಕರ್ತರು ಮತ್ತು ಪುಟಾಣಿ ಯಕ್ಷಗಾನ ಪಟುಗಳನ್ನು ಅಭಿನಂದಿಸಿದರು. ದೇವಳ ರಥಬೀದಿಯ ರಿಪೇರಿಗೆ ಡಾಮಾರು ಕೊರತೆಯಿಂದ ವಿಳಂಬವಾಗಿದೆ ಎಂದು ವಿಷಾದಿಸಿದ ಶಾಸಕ ಕೊಡ್ಗಿ, ಅಭಿವೃದ್ಧಿ ಕಾರ್ಯಗಳಿಗೆ ತನ್ನ ಸಹಕಾರ ಸದಾ ಇದೆ ಎಂಬ ಭರವಸೆ ನೀಡಿದರು.
ನಿವೃತ್ತ ಇಂಜಿನಿಯರ್ ಕೆ. ಎಸ್. ಮಂಜುನಾಥ ಶೇರೆಗಾರ್ ರಚಿಸಿದ ಶ್ರೀ ಕೋಟಿಲಿಂಗೇಶ್ವರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ್ ಐತಾಳರು ಐತಿಹಾಸಿಕ ಊರು ಕೋಟೇಶ್ವರ ಮತ್ತು ಶ್ರೀ ಕೋಟಿಲಿಂಗೇಶ್ವರನ ಮಹಿಮೆಗಳನ್ನು ಬಿತ್ತರಿಸುವ ಇನ್ನಷ್ಟು ಕೃತಿಗಳು ರಚಣೆಯಾಗಲಿ ಎಂದರು. ಯಕ್ಷಗಾನ ಪ್ರಸಂಗದ ಪ್ರಥಮ ಪ್ರತಿಯನ್ನು ಪುಟಾಣಿ ಯಕ್ಷ ಕಲಾವಿದರಿಗೆ ಹಸ್ತಾಂತರಿಸಿ ಆಶೀರ್ವದಿಸಿದರು.
ಉಳ್ಳೂರು ಶ್ರೀ ಕಾರ್ತಿಕೆಯ ಸುಭ್ರಮಣ್ಯ ದೇವಸ್ಥಾನದ ಅರ್ಚಕ ವಿದ್ವಾನ್ ಮಾಧವ ಅಡಿಗ ಧಾರ್ಮಿಕ ಸಂದೇಶ ನೀಡಿದರು. ಮುಖ್ಯ ಅತಿಥಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶುಭ ಹಾರೈಸಿ, ತಾವು ಕೋಟೇಶ್ವರ ದೇವಸ್ಥಾನ ಪರಿಸರದಲ್ಲಿ ಸಂಘದ ಚಟುವಟಿಕೆಗಳನ್ನು ನಡೆಸಿದ್ದನ್ನು ಮತ್ತು ಚಿಕ್ಕಂದಿನಲ್ಲಿ ಕೊಡಿಹಬ್ಬಕ್ಕೆ ಬರುತ್ತಿದ್ದುದನ್ನು ಸ್ಮರಿಸಿಕೊಂಡರು.
ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ಶುಭ ಹಾರೈಸಿದರು. ಯಕ್ಷಗಾನ ಪ್ರಸಂಗಕರ್ತ ಕೆ. ಎಸ್. ಮಂಜುನಾಥ ಶೇರೆಗಾರ್ ರನ್ನು ಸನ್ಮಾನಿಸಲಾಯಿತು. ಕೃತಜ್ಞತೆ ಸಲ್ಲಿಸಿದ ಶೇರೆಗಾರ್, ಕೋಟೇಶ್ವರ ದೇವಾಲಯದ ಆಶ್ರಯದಲ್ಲಿ ಒಂದು ಯಕ್ಷಗಾನ ಮೇಳ ಹೊರಡಿಸಬೇಕು ಎಂಬ ತಮ್ಮ ಆಶಯ ವ್ಯಕ್ತಪಡಿಸಿದರು. ಸಮಿತಿ ಸದಸ್ಯ ಮಂಜುನಾಥ ಆಚಾರ್ಯ ಕೃತಿಕರ್ತರ ಸನ್ಮಾನಪತ್ರ ವಾಚಿಸಿದರು.ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಸ್ವಾಗತಿಸಿದರು. ಸದಸ್ಯ ಸುರೇಶ್ ಬೆಟ್ಟಿನ್ ಪ್ರಸ್ತಾವನೆಗೈದರು. ಸದಸ್ಯೆ ಶಾರದಾ ಹಾಗೂ ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗದ ಸದಸ್ಯರು ಉಪಸ್ಥಿತರಿದ್ದರು. ಶಿವಾನಂದ ದೊಡ್ಡೋಣಿ ಕಾರ್ಯಕ್ರಮ ನಿರೂಪಿಸಿ, ಸದಸ್ಯೆ ಭಾರತಿ ವಂದಿಸಿದರು. ನಂತರ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳಲ್ಲಿ ಮೊದಲನೆಯದಾಗಿ ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗದ ಪುಟಾಣಿಗಳಿಂದ ಶ್ರೀ ಕೋಟಿಲಿಂಗೇಶ್ವರ ಮಹಾತ್ಮೆ ಯಕ್ಷಗಾನ ನಡೆಯಿತು.