ಕುಂದಾಪುರ: ಕರ್ನಾಟಕ ಕರಾವಳಿಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬವು ಸಡಗರ ಸಂಭ್ರಮದಿಂದ ಸೋಮವಾರ ಸಂಪನ್ನಗೊಂಡಿತು ಸೋಮವಾರ ನಡೆದ ವೈಭವದ ಬ್ರಹ್ಮರಥೋತ್ಸವಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಹಸ್ರಾರು ಮಂದಿ ಭಕ್ತರು ನಸುಕಿನಿಂದಲೆ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದರು ಮಧ್ಯಾಹ್ನ 11:31 ಕ್ಕೆ ನಡೆದ ವೈಭವದ ರಥೋತ್ಸವದ ಆರೋಹಣವನ್ನು ನೋಡಿದ ಭಕ್ತರು ಕಣ್ಮನ ತುಂಬಿಕೊಂಡರು ರಥೋತ್ಸವದ ಆರೋಹಣಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು
ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರುಗಳನ್ನು ರಥದ ಮೇಲಕ್ಕೆ ಏರಿಸಲಾಯಿತು
ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ನಂದಳಿಕೆಯ ಪಿ. ರವಿರಾಜ್ ಭಟ್ ಅವರು ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನ ಮಾಡಿದರು. ನಂತರ ನೆರೆದ ಭಕ್ತರು ಹರಹರ ಮಹಾದೇವ ಎನ್ನುವ ಜಯಘೋಷ ಮಾಡುತ್ತಿದ್ದಂತೆ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಹಣ್ಣುಕಾಯಿ ಹಾಗೂ ರಥಕ್ಕೆ ಕಾಯಿ ಒಡೆಯುವ ಸೇವೆಗಳನ್ನು ಸಲ್ಲಿಸಲಾಯಿತು. ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ಮಹಾ ರಥೋತ್ಸವವು ನಡೆಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿದಾನವನ್ನು ನೆರವೇರಿಸಲಾಯಿತು
ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ್ ಶೇರೆಗಾರ್ ಬೀಜಾಡಿ, ಚಂದ್ರಿಕಾ ಧನ್ಯ ಕೋಟೇಶ್ವರ, ಶಾರದಾ ಮೂಡುಗೋಪಾಡಿ, ಮಂಜುನಾಥ ಆಚಾರ್ಯ, ಭಾರತಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಮಾರ್ಕೋಡು ಸುಧೀರ್ ಕುಮಾರ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಆಸ್ತಿಕ ಸಮಾಜದ ಅಧ್ಯಕ್ಷ ಕೆ.ರವೀಂದ್ರ ಐತಾಳ್, ಕಾರ್ಯದರ್ಶಿ ಕೆ.ವಿನೋದ್ ಮರ್ತಪ್ಪ ಶೇಟ್, ಜತೆ ಕಾರ್ಯದರ್ಶಿ ದಿನೇಶ್ ಸುವರ್ಣ ಚಾತ್ರಬೆಟ್ಟು ಉಪಸ್ಥಿತರಿದ್ದರು