Home » ಆತ್ಮನ ಸಂಸರ್ಗ
 

ಆತ್ಮನ ಸಂಸರ್ಗ

by Kundapur Xpress
Spread the love

ಮನಸ್ಸಿನ ಸಮಸ್ಥಿತಿಯನ್ನು ಕಾಪಾಡುವುದು ಬದುಕಿನ ಬಲುದೊಡ್ಡ ತಪಸ್ಸು ಬಾಹ್ಯ ಜಗತ್ತಿನೊಂದಿಗೆ ಸ್ಪಂದಿಸುವಾಗ ಸಹಜವಾಗಿಯೇ ಮನಸ್ಸಿನಲ್ಲಿ ರಾಗದ್ವೇಷಗಳು ಪ್ರವಹಿಸುತ್ತವೆ. ಅದಕ್ಕೆ ಕಾರಣ ನಮ್ಮಲ್ಲಿನ ರಾಜಸ ಹಾಗೂ ತಾಮಸ ಗುಣಗಳು, ಸದಾ ಸುಖ-ತೃಪ್ತಿಯನ್ನು ಬಯಸುವುದು ಇಂದ್ರಿಯಗಳ ಸ್ವಭಾವ. ಕಣ್ಣು, ಕಿವಿ, ಮೂಗು, ನಾಲಗೆ ಹಾಗೂ ಚರ್ಮ ಬಹು ಸೂಕ್ಷ್ಮಸಂವೇದಿಗಳಾಗಿರುವುದರಿಂದ ಬಾಹ್ಯ ಜಗತ್ತಿನೊಂದಿಗೆ ಅವು ತುಡಿಯುತ್ತಲೇ ಇರುತ್ತವೆ. ಈ ನಮ್ಮ ಪಂಚೇಂದ್ರಿಯಗಳು ಬಹಿರ್ಮುಖಿಗಳಾಗಿರುವುದು ಕೂಡ ಇದಕ್ಕೆ ಕಾರಣ. ಪ್ರಕೃತಿಯೊಂದಿಗೆ ಪಂಚೇಂದ್ರಿಯಗಳ ನಿರಂತರವಾಗಿ ಸ್ಪಂದಿಸುವುದರಿಂದ ನಮ್ಮೊಳಗಿನ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಸದಾ ಜಾಗೃತ ಸ್ಥಿತಿಯಲ್ಲಿರುತ್ತವೆ. ತಾಮಸ ಹಾಗೂ ರಾಜಸ ಗುಣಗಳಲ್ಲಿ ಅವು ಅಂತರ್ ವಾಹಿನಿಯಾಗಿ ಪ್ರವಹಿಸುತ್ತಲೇ ಇರುತ್ತವೆ. ಆದುದರಿಂದ ಎಷ್ಟೋ ಸಂದರ್ಭಗಳಲ್ಲಿ ನಾವು ಅಪೇಕ್ಷೆ ಪಡದಿದ್ದರೂ ನಮ್ಮ ಮನಸ್ಸು ಇಂದ್ರಿಯ ಸುಖಕ್ಕೆ ಹಾತೊರೆದು ಮುನ್ನುಗ್ಗುತ್ತದೆ. ಅನಿತ್ಯವಾದ ಈ ಜಗತ್ತಿನ ಎಲ್ಲ ಸುಖಗಳು ಭ್ರಾಮಕವಾಗಿರುವುದರಿಂದ ಅವು ದುಃಖವನ್ನೂ ಒಳಗೊಂಡಿರುತ್ತವೆ. ಚೋದ್ಯದ ಸಂಗತಿಯೆಂದರೆ ಆ ಮಿಥ್ಯಾ ಸುಖವನ್ನು ಅನುಭವಿಸುವ ತನಕವೂ ದುಃಖದ ಅಧ್ಯಾಯ ತೆರೆದುಕೊಳ್ಳುವುದಿಲ್ಲ. ಪಂಚೇಂದ್ರಿಯಗಳನ್ನು ನಿಗ್ರಹಿಸಿದಾಗಲೇ ಮನಸ್ಸಿನ ಸಮಸ್ಥಿತಿ ಏರ್ಪಡಲು ಸಾಧ್ಯವಾಗುತ್ತದೆ. ಬಾಹ್ಯ ಪ್ರಪಂಚದ ಅನಿತ್ಯತೆಯನ್ನು ತಿಳಿಯುವುದು ಕೂಡ ಇದಕ್ಕೆ ಪೂರಕವಾಗುತ್ತದೆ. ಆಗ ಮನಸ್ಸು ಹೊರಗಿನ ಆಕರ್ಷಣೆಗಳಿಂದ ಮುಕ್ತವಾಗುವುದು. ಬಾಹ್ಯ ಜಗತ್ತಿನಲ್ಲಿ ದೊರಕುವ ಸುಖ-ಸಂತೋಷಗಳೆಲ್ಲವೂ ಕ್ಷಣಿಕವೆಂಬ ಸತ್ಯವನ್ನು ಅರಿತಾಗ ಆತ್ಮನಲ್ಲಿ ಮನಸ್ಸು ತೊಡಗಿಕೊಳ್ಳುವುದು. ಆತ್ಮನ ಸಂಸರ್ಗದಲ್ಲಿ ಏರ್ಪಡುವ ಆನಂದವೇ ಶಾಶ್ವತವಾದುದು ಎಂಬ ಅರಿವು ಉಂಟಾಗುವುದು.

   

Related Articles

error: Content is protected !!