Home » ದೇವರ ಸ್ಮರಣೆ
 

ದೇವರ ಸ್ಮರಣೆ

by Kundapur Xpress
Spread the love

ಅರಿಷಡ್ವರ್ಗಗಳ ಆಕರ್ಷಣೆಗೆ ಸಿಲುಕಿಕೊಳ್ಳುವ ಪಂಚೇಂದ್ರಿಯಗಳಿಂದಾಗಿ ನಮಗೆ ನಮ್ಮ ದೇಹದ ಮೇಲೆ ನಿಯಂತ್ರಣ ದೊರಕುವುದು ಕಷ್ಟ ಎಂದು ಸಾಮಾನ್ಯರಾದ ನಮಗೆ ಅನ್ನಿಸುವುದು ಸಹಜವೇ ಆಗಿದೆ. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ನಾವು ನಮ್ಮ ದೇಹವನ್ನು ದಂಡಿಸುವುದು ಸರಿಯೇ? ಈ ಪ್ರಶ್ನೆಯೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ಮನಸ್ಸನ್ನು ನಿಯಂತ್ರಿಸಲು ನಮಗೆ ಸಾಧ್ಯವಾದರೆ ದೇಹವು ಅದನ್ನು ಅತಿಕ್ರಮಿಸಿ ಹೋಗದು. ಆದುದರಿಂದ ತಪ್ಪು ದೇಹದ್ದಲ್ಲ; ಲಗಾಮಿಲ್ಲದ ಮನಸ್ಸಿನದ್ದೇ ಆಗಿದೆ. ದೇಹವನ್ನು ನಾವು ಕೊಳ್ಳುವುದೆಂದರೆ ಆದು ನಿರೋಗಿಯಾಗಿರುವಂತೆ ನೋಡಿಕೊಳ್ಳುವುದು ಎಂದೇ ಅರ್ಥ.ವಿನಾ ಅದನ್ನು ಗಾತ್ರದಲ್ಲಿ, ಭಾರದಲ್ಲಿ ಬೆಳೆಯಗೊಡುವುದು ಎಂದರ್ಥವಲ್ಲ. ಪರಮಾತ್ಮನ ಅಂಶವಾಗಿ ಜೀವಾತ್ಮನು ನಮ್ಮ ದೇಹದಲ್ಲಿ ನೆಲೆಸಿರುವುದರಿಂದಲೇ ನಮ್ಮ ದೇಹವು ಚೈತನ್ಯಶಾಲಿಯಾಗಿದೆ. ಕರ್ಮಾಂಗಗಳು ಕ್ರಿಯಾಶೀಲವಾಗಿವೆ. ಜ್ಞಾನಾಂಗವು ಅಧ್ಯಯನಶೀಲವಾಗಿದೆ. ಅದರಲ್ಲಿ ನಮ್ಮ ಹೆಚ್ಚುಗಾರಿಕೆಯಾಗಲೀ ಸಾಮರ್ಥ್ಯವಾಗಲೀ ಏನೂ ಇಲ್ಲ. ಏನಿದ್ದರೂ ಅದು ದೇವರ ಶಕ್ತಿಯ ಅಭಿವ್ಯಕ್ತಿ. ನಮ್ಮೊಳಗಿನ ದಿವ್ಯ ಚೈತನ್ಯವು ನಮ್ಮಿಂದ ನಿರ್ಗಮಿಸಿದ ತತ್‍ಕ್ಷಣವೇ ನಮ್ಮ ದೇಹವು ನಿರ್ಜೀವವಾಗುವುದು. ಆ ಸ್ಥಿತಿಯನ್ನು ತಲುಪಿದ ಕೂಡಲೇ ಮತ್ತೆ ದೇಹಕ್ಕೆ ಯಾವ ಮಹತ್ವವೂ ಲಭಿಸದು. ಈ ಸೂಕ್ಷ್ಮವನ್ನು ಅರಿತರೆ ಮಾತ್ರವೆ ನಾವು ನಮ್ಮ ಬದುಕಿನ ಸಮಸ್ತ ಚಟುವಟಿಕೆಗಳನ್ನು ದೇವರ ಪ್ರೀತ್ಯರ್ಥವಾಗಿ ಮಾಡಲು ಸಾಧ್ಯವಾಗುವುದು. ಇಲ್ಲದಿದ್ದರೆ ಅಹಂಭಾವ ಮಾತ್ರವೇ ತುಂಬಿಕೊಂಡು ಅದು ನಮ್ಮೊಳಗಿನ ದೇವರನ್ನು ಮರೆಯುವಂತೆ ಮಾಡುವುದು. ಬದುಕಿನ ಮಹೋನ್ನತ ಉದ್ದೇಶದಿಂದ ಅದು ನಮ್ಮನ್ನು ಬಹುದೂರ ಕೊಂಡೊಯ್ದು ಶೋಕ ಸಾಗರದಲ್ಲಿ ನಮ್ಮನ್ನು ಮುಳುಗಿಸುವುದು. ಸ್ವಾರ್ಥಪರತೆಯಿಂದ ಬದುಕು ಸದಾ ಅತೃಪ್ತಿ, ಅಸಮಾಧಾನ, ಅಶಾಂತಿಯಿಂದ ತುಂಬಿ ಅಪೂರ್ಣವೆನಿಸುವುದು

   

Related Articles

error: Content is protected !!