ಉಡುಪಿ : ನಾಲ್ಕು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಉಡುಪಿ ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ. ಈ ಚುನಾವಣಾ ಫಲಿತಾಂಶ ಮುಂಬರಲಿರುವ ಪಾರ್ಲಿಮೆಂಟ್ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಬಡವರ ಕಲ್ಯಾಣ ಯೋಜನೆಗಳು ಹಾಗೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಪರಿಕಲ್ಪನೆಯಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಗೌರವಯುತವಾಗಿ ಬಾಳುವ ಅವಕಾಶವನ್ನು ಕಲ್ಪಿಸಿರುವ ಜೊತೆಗೆ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ವರದಿ ಮತ್ತು ಆಯಾ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರ ಬಲಿಷ್ಠ ಸಂಘಟನೆ ಈ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ತೆಲಂಗಾಣದಲ್ಲೂ ಬಿಜೆಪಿ ಅದ್ಬುತ ಸಾಧನೆಗೈದಿದೆ. ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲೂ ಬಿಜೆಪಿ ಅಧಿಕಾರಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ
ಬಿಟ್ಟಿ ಭಾಗ್ಯಗಳಿಗಿಂತ ಅಭಿವೃದ್ಧಿ ಪರ, ಜನ ಪರ ಆಡಳಿತವೇ ಮುಖ್ಯ ಎಂಬುದನ್ನು ಜನತೆ ಈ ಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ. ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ಸಿನ ಜನ ವಿರೋಧಿ ನೀತಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ