ಮಂಗಳೂರು: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಳೂರು ಮಹಾನಗರ ವತಿಯಿಂದ ಅಯೋಧ್ಯೆ ತೀರ್ಥ ಕ್ಷೇತ್ರದಿಂದ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಯನ್ನು ವಿವಿಧ ಕೇಂದ್ರಗಳಿಗೆ ವಿತರಿಸುವ ಕಾರ್ಯಕ್ರಮ ನಗರದ ಬಾಳಂಭಟ್ ಹಾಲ್‌ನಲ್ಲಿ ಸೋಮವಾರ ನೆರವೇರಿತು.
ಬಾಳಂಭಟ್ ರಾಧಾಕೃಷ್ಣ ಮಂದಿರದಲ್ಲಿ ಮಂತ್ರಾಕ್ಷತೆಯ ಕುಂಭಗಳಿಗೆ ಪೂಜೆ ಸಲ್ಲಿಸಿದ ಬಳಿಕ, ಮಂಗಳೂರು ಮಹಾನಗರ ವ್ಯಾಪ್ತಿಯ ವಿವಿಧ ಕಡೆಯಲ್ಲಿ ವಿತರಿಸಲು ಹಸ್ತಾಂತರಿಸಲಾಯಿತು. ನಂತರ ಬಾಳಂಭಟ್ ಹಾಲ್‌ನಿಂದ ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದ ಮೂಲಕ ಸಾಗಿ ಶರವು ಮಹಾಗಣಪತಿ ದೇವಸ್ಥಾನಕ್ಕೆ ಮಂತ್ರಾಕ್ಷತೆಯನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು. ಶರವು ದೇವಾಲಯದಲ್ಲಿ ಪೂಜೆ ಸಲ್ಲಿಕೆಯಾದ ಬಳಿಕ ನಗರದ ವಿವಿಧೆಡೆಗೆ ಮಂತ್ರಾಕ್ಷತೆ ಕೊಂಡೊಯ್ಯಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ರಾಮ ಎಂದರೆ ಧರ್ಮ ಎಂದು ರಾಮಾಯಣ ಹೇಳುತ್ತದೆ. ಧರ್ಮವನ್ನು ಆರಾಧಿಸಿದರೆ ರಾಮನನ್ನು ಆರಾಧಿಸಿದಂತೆ. ರಾಮನ ಆರಾಧನೆಯೆಂದರೆ ಧರ್ಮದ ಆರಾಧನೆ. ಅನೇಕ ಮಂದಿಯ ತ್ಯಾಗ, ಬಲಿದಾನದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನಂತೆ ಬದುಕುವ ಮೂಲಕ ಧರ್ಮಾಚರಣೆ ಮಾಡಬೇಕು. ಅಯೋಧ್ಯೆಯಲ್ಲಿ ರಾಮ ದೇವರ ಪ್ರಾಣಪ್ರತಿಷ್ಠೆ ನಡೆಯುವಾಗ ವಿಶೇಷವಾಗಿ ರಾಮನಾಮ ಜಪ ಸೇರಿದಂತೆ ವಿವಿಧ ರೀತಿಯಲ್ಲಿ ರಾಮನ ಆರಾಧನೆ ಮಾಡಬೇಕು. ಪರಿಪೂರ್ಣವಾದ ಧಾನ್ಯವಾದ ಅಕ್ಕಿಯಲ್ಲಿ ರಾಮನ ಕ್ಷೇತ್ರದಲ್ಲಿ ರಾಮ ಮಂತ್ರ ಅಭಿಮಂತ್ರಿಸಿರುವ ಮಂತ್ರಾಕ್ಷತೆ ಎಲ್ಲರ ಮನೆಗೆ ತಲುಪಲಿದ್ದು, ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು. ಪವಿತ್ರವಾದ ಮಂತ್ರಾಕ್ಷತೆ ಪವಿತ್ರವಾಗಿ ಮನೆ ಮನೆಗಳಿಗೆ ತಲುಪಬೇಕು. ಮಂತ್ರಾಕ್ಷತೆ ಪಡೆದು ಶ್ರೀ ರಾಮನ ಚಿಂತನೆಯನ್ನು ಮಾಡಬೇಕು. ಮಂತ್ರಾಕ್ಷತೆ ಹಿಂದು ಸಮಾಜದ ಒಗ್ಗಟ್ಟಿಗೆ ಕಾರಣವಾಗಲಿ ಎಂದರು.
ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಹಿಂದುಗಳ ಬಹುದೊಡ್ಡ ಕನಸಾಗಿತ್ತು. ಆದರೆ ಅದು ಇಷ್ಟೊಂದು ಸುಸೂತ್ರವಾಗಿ ಸಾಕಾರವಾಗುತ್ತದೆ ಎಂಬುದಾಗಿ ಯಾರು ಕೂಡ ಊಹಿಸಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಾಣಾಕ್ಷತನ, ಯೋಜನೆ ಮತ್ತು ಯೋಚನೆಗಳಿಂದ ವ್ಯವಸ್ಥಿತ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಪರ್ವ ಸಂದರ್ಭದಲ್ಲಿ ನಾವೆಲ್ಲರೂ ರಾಮನ ನಡೆ ಮತ್ತು ಕೃಷ್ಣನ ಬೋಧನೆಯಂತೆ ಬದುಕುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಮಾತನಾಡಿ, ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆ ಜ.೨೨ಕ್ಕೆ ನಡೆಯಲಿದೆ. ಆ ದಿನ ಅಯೋಧ್ಯಾ ಕ್ಷೇತ್ರದಲ್ಲಿ ಆಯ್ದ ಸಾಧು ಸಂತರು, ಕುಶಲಕರ್ಮಿಗಳು, ಕರಸೇವಕರು, ಅಧಿಕಾರಿಗಳು ಸೇರಿದಂತೆ ೧೦,೦೦೦ ಮಂದಿ ಮಾತ್ರ ಇರುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಜಿ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಅಂದು ಎಲ್ಲ ಹಿಂದುಗಳು ತಮ್ಮ ಮನೆಗಳಲ್ಲಿ ದೀಪಾವಳಿಯ ತೆರದಲ್ಲಿ ಸಂಜೆ ಕನಿಷ್ಠ ೫ ದೀಪ ಬೆಳಗಿಸಬೇಕು. ಉತ್ತರ ದಿಕ್ಕಿಗೆ ಅಯೋಧ್ಯೆಯ ಕಡೆಗೆ ಮುಖ ಮಾಡಿ ಆರತಿ ಬೆಳಗಬೇಕು ಎಂದರು.
ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಅಭಿಯಾನ ಜ.೧ರಿಂದ ೧೫ರವಗೆಗೆ ನಡೆಯಲಿದೆ. ಜತೆಗೆ ಅಯೋಧ್ಯೆ ಕ್ಷೇತ್ರ, ರಾಮನ ಭಾವಚಿತ್ರ ಮತ್ತು ಕರಪತ್ರ ನೀಡಲಾಗುವುದು. ಗ್ರಾಮದ ದೇವಸ್ಥಾನಗಳಲ್ಲಿ ಭಜನೆ, ಸತ್ಸಂಗ, ಸಂತರಿಂದ ಮಾತು, ಶ್ರೀ ರಾಮ ಜಯರಾಮ ಜಯ ಜಯ ರಾಮ ತಾರಕ ಮಂತ್ರ ಪಠಣ ನಡೆಯಲಿವೆ. ಜ.೭ರಂದು ಒಂದೇ ದಿನ ಮಂಗಳೂರು ವಿಭಾಗದ ಎಲ್ಲ ಮನೆಗಳಿಗೂ ತೆರಳಿ ಮಂತ್ರಾಕ್ಷತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ದೇಶದ ಮೂಲೆ, ಮೂಲೆಯ ಹಳ್ಳಿಗಳಲ್ಲಿ ಹಿಂದುಗಳ ಮನೆ ಮನೆಗಳ ಮುಂದೆ ಕೇಸರಿ ಬಾವುಟ ಹಾರಾಡುವ ದಿನ ಸಮೀಪಿಸಿದೆ. ಈಗಾಗಲೇ ಕೇಸರಿ ಬಾವುಟ ಹಾರಾಟ ಆರಂಭವಾಗಿದೆ. ಜಗತ್ತು ಭಾರತದತ್ತ ನೋಡುತ್ತಿದೆ. ಭಾರತ ಹೇಳಿದಂತೆ ಜಗತ್ತು ಕೇಳುವ ದಿನವೂ ಬರಲಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಮಹಾನಗರ ಸಂಘಚಾಲಕ್ ಡಾ. ಸತೀಶ್ ರಾವ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ಉಪಸ್ಥಿತರಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮೊದಲಾದವರು ಭಾಗವಹಿಸಿದ್ದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು