Home » ಅನಿತ್ಯ ಜಗತ್ತು
 

ಅನಿತ್ಯ ಜಗತ್ತು

by Kundapur Xpress
Spread the love

ದೈನಂದಿನ ಬದುಕಿನಲ್ಲಿ ನಾವು ಯಾವಾಗಲೂ ಸುಲಭವಾಗಿ ಭಾವಾವೇಶಕ್ಕೆ ಗುರಿಯಾಗುತ್ತೇವೆ. ಆ ಮೂಲಕ ಮನಸ್ಸಿನ ಸಮತ್ವವನ್ನು ಕಳೆದುಕೊಳ್ಳುತ್ತೇವೆ. ಸಮತ್ವವನ್ನು ಕಳೆದುಕೊಳ್ಳುವ ಮೂಲಕ ನಿರಂತರ ದುಃಖಕ್ಕೆ ಗುರಿಯಾಗುತ್ತೇವೆ. ಹೀಗೆ ಬದುಕಿನಲ್ಲಿ ಸದಾ ಪರಿತಪಿಸುವ ನಮ್ಮಂತಹ ಸಾಮಾನ್ಯ ಮನುಜರನ್ನು ಕಂಡೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ: ಪ್ರಿಯವಾದುದನ್ನು ಅರ್ಥಾತ್ ಜನರು ಪ್ರಿಯವೆಂದು ತಿಳಿದುಕೊಳ್ಳುವುದನ್ನು ಪಡೆದಾಗ ಸಂತೋಷ ಪಡದೇ ಇರುವವನು ಮತ್ತು ಅಪ್ರಿಯವಾದುದನ್ನು ಪಡೆದಾಗ ಉದ್ವೇಗದಿಂದ ದುಃಖಪಡದೇ ಇರುವವನು ಜ್ಞಾನಿ. ಅಂತಹ ಸ್ಥಿರ ಬುದ್ಧಿಯುಳ್ಳ ಹಾಗೂ ಸಂಶಯರಹಿತನಾದ ಬ್ರಹ್ಮಜ್ಞಾನಿ ಪುರುಷನು ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಒಂದೇ ಭಾವನೆಯಿಂದ ಲೀನ ವಾಗಿದ್ದಾನೆ. ಪ್ರಿಯವಾದುದು ಮತ್ತು ಅಪ್ರಿಯವಾದುದು ಬದುಕಿನಲ್ಲಿ ಪ್ರಾಪ್ತವಾದಾಗ ಉದ್ವೇಗಕ್ಕೆ ಒಳಗಾಗದೇ ಇರಬೇಕಾದರೆ ಐಹಿಕ ಬದುಕಿನ ಭಾವವಿಕಾರಕ್ಕೆ ಇತಿಮಿತಿಗಳನ್ನು ಅರಿತಿರಬೇಕಾಗುತ್ತದೆ. ಯಾವತ್ತೂ ಭಾವವಿಕಾರಕ್ಕೆ ಒಳಗಾಗದವನೇ ನಿಜವಾದ ಜ್ಞಾನಿ ಎಂದು ಶ್ರೀಕೃಷ್ಣನು ಹೇಳಲು ಮುಖ್ಯ ಕಾರಣವೊಂದಿದೆ. ಅದೆಂದರೆ ಪರಮಾತ್ಮನನ್ನು ಹೊರತುಪಡಿಸಿ ಉಳಿದೆಲ್ಲವೂ ಅನಿತ್ಯವಾಗಿರುವಾಗ ಆ ಅನಿತ್ಯ ಸಂಗತಿಗಳಿಂದ ದೊರಕುವ ಸುಖ-ದುಃಖ ಯಾವುದೂ ನಿಜವಲ್ಲ; ಅವು ಕೇವಲ ಭ್ರಾಮಕ ಎಂಬ ಸತ್ಯದ ಅರಿವು ಇರುವಾತನ ಮನಸ್ಸು ಸಂಪೂರ್ಣವಾಗಿ ದೇವರಲ್ಲೇ ಲೀನವಾಗಿರುವುದು. ಆತನನ್ನು ಬಾಹ್ಯ ಜಗತ್ತಿನ ಯಾವ ವಿದ್ಯಮಾನಗಳೂ ಉದ್ವೇಗಕ್ಕೆ ಗುರಿಮಾಡಲಾರವು. ಆತನನ್ನು ಎಷ್ಟು ಮಾತ್ರಕ್ಕೂ ಅವು ದುರ್ಬಲಗೊಳಿಸಲಾರವು, ಭಾವವಿಕಾರ ಉಂಟುಮಾಡಲಾರವು. ದೇವರ ಅಸ್ತಿತ್ವದ ಬಗ್ಗೆ ಆತನಲ್ಲಿ ಒಂದಿನಿತೂ ಸಂದೇಹ ಇಲ್ಲದಿರುವುದರಿಂದಲೇ ಆತನಲ್ಲಿ ಸಮತ್ವವು ನೆಲೆಗೊಂಡಿದೆ. ಮಿಥ್ಯಾ ಜಗತ್ತಿನ ಅನಿತ್ಯತೆಯ ಅರಿವು ಆತನಿಗಿದೆ. ಆತ್ಮಜ್ಞಾನಿಯಾದವನು ದೇವರನ್ನಲ್ಲದೆ ಬೇರೇನನ್ನೂ ಬಯಸನು. ಆದುದರಿಂದಲೇ ಬಾಹ್ಯ ಜಗತ್ತಿನ ಯಾವತ್ತೂ ಸುಖ-ದುಃಖಗಳು, ಹುಟ್ಟು-ಸಾವುಗಳು ಆತನನ್ನು ಗೊಂದಲಕ್ಕೆ ಗುರಿ ಮಾಡಲಾರವು

   

Related Articles

error: Content is protected !!