ಸಾಂಸಾರಿಕ ಬದುಕಿನಲ್ಲಿ ನಾವು ಪಡೆಯುವ ಎಲ್ಲ ಸುಖಭೋಗಗಳು ಇಂದ್ರಿಯ ಹಾಗೂ ವಿಷಯಗಳ ಸಂಯೋಗದಿಂದ ಉತ್ಪತ್ತಿಯಾದವುಗಳು. ಒಂದರ ಆಕರ್ಷಣೆಗೆ ಇನ್ನೊಂದು ಗುರಿಯಾಗುವ ಮೂಲಕ ಉಂಟಾದ ಸಂಯೋಗವು ಸಹಜವಾಗಿಯೇ ಆದಿ ಮತ್ತು ಅಂತ್ಯವನ್ನು ಹೊಂದಿದೆ. ಆದುದರಿಂದಲೇ ದೈಹಿಕವಾಗಿ ನಾವು ಪಡೆಯುವ ಯಾವತ್ತೂ ಇಂದ್ರಿಯ ಸುಖಗಳು ಕ್ಷಣಿಕವಾಗಿವೆ. ಅವು ನಿಜವಾದ ಸುಖವಲ್ಲ, ಸುಖದಂತೆ ಕಂಡುಬರುವ ಛಾಯಾ ಸುಖ, ಕನ್ನಡಿಯಲ್ಲಿ ನಾವು ಕಾಣುವ ನಮ್ಮ ಬಿಂಬದ ಹಾಗೆ, ದೇಹದ ಮೂಲಕ ನಮ್ಮನ್ನು ನಾವು ಗುರುತಿಸಿಕೊಂಡಂತೆ ಇಂದ್ರಿಯ ಸುಖಕ್ಕಾಗಿ ನಾವು ಹಪಹಪಿಸುತ್ತೇವೆ. ಕಾರಣ ಮನಸ್ಸು ಮೃಗೀಯ ಪ್ರವೃತ್ತಿಯಲ್ಲಿ ವಿಜೃಂಭಿಸುತ್ತಿರುತ್ತದೆ. ದೇಹಕ್ಕೆ ದೊರಕುವ ಸುಖವೇ ನಿಜವಾದ ಸುಖವೆಂಬ ಭಾವನೆಯಲ್ಲಿ ಮನಸ್ಸು ಮತ್ತು ಬುದ್ದಿಯ ವಿವೇಕವನ್ನು ಮೀರಿ ಹೋಗುತ್ತೇವೆ. ಛಾಯಾ ಸುಖದ ಬೆನ್ನು ಹತ್ತಿದ ಪರಿಣಾಮವಾಗಿ ಅದು ಮರೀಚಿಕೆ ಎನ್ನುವ ಸತ್ಯ ಗೋಚರವೇ ಆಗದಷ್ಟು ಅಜ್ಞಾನದಲ್ಲಿ ಮುಳುಗುತ್ತೇವೆ. ಪರಿಣಾಮವಾಗಿ ಬದುಕು ನಮಗೂ ಇತರರಿಗೂ ಅಸಹನೀಯವಾಗುತ್ತದೆ. ದೇಹ ಮತ್ತು ಆತ್ಮನನ್ನು ಪ್ರತ್ಯೇಕವಾಗಿ ಕಾಣಲು ಸಾಧ್ಯವಾಗಬೇಕಾದರೆ ಮನಸ್ಸು ಮತ್ತು ಬುದ್ಧಿ ಜತೆಗೂಡಿ ಕೆಲಸಮಾಡಬೇಕು ಎಂದರೆ ತಮಸ್ಸನ್ನು ರಜಸ್ಸು ಗೆಲ್ಲಬೇಕು. ಆದರೆ ಆತ್ಮಜ್ಞಾನವನ್ನು ಪಡೆಯಲು ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕು. ಅದುವೇ ಸಮತ್ವದ ಸ್ಥಿತಿಯನ್ನು ಪಡೆಯುವ ಹೆಜ್ಜೆ ಬದುಕು ಸಾತ್ವಿಕವಾಗುವ ಪ್ರಕ್ರಿಯೆ, ಅಲ್ಲಿಯೇ ಆಗುವುದು ವಿವೇಕೋದಯ. ಆಗಲೇ ಅವನು ಯೋಗಿ ಎನಿಸುವನು. ‘ಯಾರು ಶರೀರ ನಾಶವಾಗುವುದಕ್ಕಿಂತ ಮೊದಲೇ ಅರ್ಥಾತ್ ಜೀವನಾವಧಿಯಲ್ಲಿಯೇ ಕಾಮ-ಕ್ರೋಧಗಳಿಂದ ಉಂಟಾಗುವ ಉದ್ವೇಗವನ್ನು ಸಹಿಸಿಕೊಂಡು ಅವನ್ನು ಜಯಿಸಲು ಸಮರ್ಥನಾಗುವನೋ ಅವನೇ ಈ ಲೋಕದಲ್ಲಿ ಯೋಗಿ ಎನಿಸುವನು ಮಾತ್ರವಲ್ಲ ನಿಜವಾದ ಅರ್ಥದಲ್ಲಿ ಸುಖ ಎನಿಸುವನು’ ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳುವ ಮಾತು ಮನನೀಯವಾಗಿದೆ