ಬದುಕಿನಲ್ಲಿ ಎಲ್ಲರೂ ಅಪೇಕ್ಷಿಸುವುದು ಸುಖ, ಶಾಂತಿ ಹಾಗೂ ಸಮಾಧಾನದ ಬಾಳ್ವೆಯನ್ನು. ಆದರೆ ಬಾಹ್ಯ ಜಗತ್ತಿಗೆ ಅಂಟಿಕೊAಡಿರುವ ನಾವು ನಮ್ಮೆಲ್ಲ ಮುಗ್ಧತೆಗಳೊಂದಿಗೆ ಸುಖ, ಶಾಂತಿ ಹಾಗೂ ಸಮಾಧಾನವನ್ನು ಅರಸುವುದು ಭೌತಿಕ ಸಂಪತ್ತಿನಲ್ಲಿ, ನಮ್ಮಲ್ಲಿ ಐಶ್ವರ್ಯ ಹೆಚ್ಚಿದಷ್ಟು ನಾವು ಸುಖ-ಸೌಕರ್ಯದಿಂದ ಬಾಳಬಲ್ಲೆವು ಎಂದು ಸಹಜವಾಗಿಯೇ ಭಾವಿಸುತ್ತೇವೆ. ಆದರೆ ಐಶ್ವರ್ಯ, ಅಧಿಕಾರ, ಅಂತಸ್ತು, ಕೀರ್ತಿಯನ್ನು ಗಳಿಸಿದ ಹಾಗೆ ನಾವು ಭಾವಿಸಿದಂತೆ ಸುಖ, ಶಾಂತಿ, ಸಮಾಧಾನಗಳು ಬರಲಾರವು. ಗಳಿಸಿದ ಸಂಪತ್ತು, ಅಧಿಕಾರ, ಅಂತಸ್ತು ಕೀರ್ತಿಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿಯೂ ಮನಸ್ಸು ಚಿಂತಿತವಾಗಿರುತ್ತದೆ. ಒಂದೆಡೆ ಗಳಿಸುತ್ತಲೇ ಇರಬೇಕು, ಇನ್ನೊಂದೆಡೆ ಗಳಿಸಿದ್ದನ್ನು ಉಳಿಸಲು ಆರಂಭಿಸಿದಾಗ ಇದ್ದದ್ದು ಒಂದೇ ಚಿಂತೆ; ಗಳಿಸಲು ಅದನ್ನು ಹೆಚ್ಚಿಸುವ ಮತ್ತು ಉಳಿಸಿಕೊಳ್ಳುವ ಚಿಂತೆ! ಯಾವುದರಿಂದ ಸುಖ, ಶಾಂತಿ, ಸಮಾಧಾನಗಳು ಸಿಗುತ್ತವೆ ಎಂದು ಭಾವಿಸಿ ಅದರ ಬೆನ್ನಿಗೆ ಬಿದ್ದೆವೋ ಅದು ದಕ್ಕಿದ ಬಳಿಕವೂ ಚಿಂತೆಯ ಕಾರಣಗಳು ಜಾಸ್ತಿಯಾದವೇ ವಿನಾ ಸುಖ, ಶಾಂತಿ, ನೆಮ್ಮದಿಗಳು ಬರಲಿಲ್ಲ. ಏನಾಶ್ಚರ್ಯ! ಇದು ಯಾಕೆ ಹೀಗೆ? ಇದರಲ್ಲೊಂದು ಸೂಕ್ಷ್ಮವಿದೆ. ನಾವು ಯಾವುದನ್ನು ಬಯಸಿ ಅದನ್ನು ಪಡೆಯಲು ತೊಡಗುವವೋ ಆವಾಗ ಬಯಕೆಯ ಪ್ರಮಾಣ ಕೂಡ ಹೆಚ್ಚುತ್ತಲೇ ಹೋಗುವುದು. ಅನಿತ್ಯವಾದ ವಸ್ತುಗಳನ್ನು ಪಡೆಯಲು ಬಯಸಿದರೆ ಕ್ರಮೇಣ ಅದುವೇ ಹೆಚ್ಚೆಚ್ಚು ಬೇಕೆಂಬ ಆಸೆ ಮೂಡುವುದು. ಆದರೆ ಅನಿತ್ಯ ವಸ್ತುಗಳಿಂದ ನಾವು ಪಡೆಯುವ ಫಲ ಕೂಡ ಯಾವತ್ತೂ ಅನಿತ್ಯವಾಗಿಯೇ ಇರುವುದು. ಹಾಗಾಗಿ ಅನಿತ್ಯವಾದ ಐಶ್ವರ್ಯ, ಸಂಪತ್ತು, ಧನ-ಕನಕಗಳಿಂದ ನಾವು ಪಡೆಯಬಹುದಾದ ಸುಖ-ಸಂತೋಷಗಳೆಲ್ಲವೂ ಕ್ಷಣಿಕವಾಗಿಯೇ ಇರುವುದು.