ಆಧ್ಯಾತ್ಮಿಕ ಚಿಂತನೆ ನಮಗೇಕೆ ಬೇಕು? ಐಹಿಕ ಸುಖಭೋಗಗಳಲ್ಲೇ ನಮಗೆ ಸುಲಭವಾಗಿ ಆನಂದ ಸಿಗುವಾಗ ನಾವ್ಯಾಕೆ ಅದನ್ನು ಅನುಭವಿಸದೆ ವೈರಾಗ್ಯವನ್ನು ತಳೆಯಬೇಕು? ಈ ಬಗೆಯ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ. ಏಕೆಂದರೆ ನಾವು ಅಷ್ಟರಮಟ್ಟಿಗೆ ಬಾಹ್ಯ ಜಗತ್ತಿಗೆ ಅಂಟಿಕೊAಡು ಬದುಕುತ್ತಿದ್ದೇವೆ. ಹೊರಗಿನ ಆಕರ್ಷಣೆಗಳಿಗೆ ನಮ್ಮ ಇಂದ್ರಿಯಗಳು ಸ್ಪಂದಿಸುವ ತೀವ್ರತೆಯಲ್ಲಿ ನಮಗೆ ನಮ್ಮೆಲ್ಲ ಸುಖ-ಸಂತೋಷಗಳು ಭೌತಿಕ ಸಂಪತ್ತಿನಿಂದಲೇ ಸಿಗುತ್ತವೆ ಎಂಬ ಭಾವನೆ ಗಟ್ಟಿಯಾಗಿದೆ. ಆದರೆ ಭೌತಿಕ ಸಂಪತ್ತಿನಿಂದ ಸಿಗುವ ಇಂದ್ರಿಯ ಸುಖಗಳು ಮೇಲ್ನೋಟಕ್ಕೆ ಮಾತ್ರವೇ ಆನಂದದಾಯಕವಾಗಿದ್ದು ಅವು ನಿಜವಾದ ಸುಖವೆಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಕಾರಣ ಅವುಗಳನ್ನು ಅನುಭೋಗಿಸಿದಷ್ಟೂ ಅವು ನಮ್ಮಲ್ಲಿ ಅತೃಪ್ತಿಯನ್ನು, ಅಸಮಾಧಾನವನ್ನು, ಅಸೌಖ್ಯವನ್ನು ಉಂಟುಮಾಡುತ್ತವೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನಮ್ಮನ್ನು ಕುಂದಿಸುತ್ತವೆ. ಈ ದುಷ್ಪರಿಣಾಮಗಳ ಅರಿವಿಲ್ಲದೆ ಕ್ಷಣಿಕ ಸುಖವೇ ಶಾಶ್ವತ ಸುಖವೆಂಬ ಭ್ರಮೆಯಲ್ಲಿ ನಾವು ಅವುಗಳ ಬೆನ್ನು ಹತ್ತುತ್ತೇವೆ. ಐಹಿಕ ಸುಖಭೋಗಗಳನ್ನು ಅನುಭವಿಸಿಯೂ ನಾವು ಬದುಕಿನಲ್ಲಿ ಸದಾ ಅತೃಪ್ತಿ, ಅಶಾಂತಿ, ಅಸಮಾಧಾನದಿಂದ ಇರಲು ಕಾರಣವೇ ಇದು. ಆದರೆ ದೇವರ ಧ್ಯಾನದಲ್ಲಿ ಭಜನೆಯಲ್ಲಿ ತೊಡಗಿರುವಷ್ಟು ಹೊತ್ತು ನಮ್ಮ ಮನಸ್ಸು ನಿರಾಳವಾಗಿರುತ್ತದೆ. ಇದನ್ನು ನಾವು ಗಮನಿಸಬೇಕು. ಆ ನಿರಾಳತೆ, ನಿರುದ್ವಿಗ್ನತೆ ಬರಲು ನಾವು ನಮ್ಮೊಳಗೆ ದೇವರನ್ನು ಕಾಣಲು ನಡೆಸಿದ ಪ್ರಾಮಾಣಿಕ ಪ್ರಯತ್ನವೇ ಕಾರಣವಾಗಿದೆ. ದೇವರ ಧ್ಯಾನದಲ್ಲಿ ನಿತ್ಯವೂ ನಾವು ತೊಡಗಿಕೊಂಡಾಗ ದೇವರೆಡೆಗಿನ ನಮ್ಮ ಪಯಣ ಆರಂಭವಾಗುತ್ತದೆ. ಆ ಪಯಣವು ಸಾಗುವುದು ದೇವರು ವಿರಾಜ ಮಾನನಾಗಿರುವ ನಮ್ಮ ಹೃದಯದೇಗುಲದ ಒಳಗೇ, ಆತ್ಮಜ್ಯೋತಿ ಬೆಳಕಲ್ಲಿ ದೇವರನ್ನು ಕಾಣುವುದೇ ನಮ್ಮ ಅನುದಿನದ ಪ್ರಯತ್ನವಾಗಬೇಕು. ಆಗ ಬಾಹ್ಯ ಜಗತ್ತಿನ ಬಂಧನದಿಂದ ಸ್ವಲ್ಪ ಮಟ್ಟಿಗಾದರೂ ಬಿಡುಗಡೆಯ ಆನಂದವನ್ನು ನಾವು ಸವಿಯಬಹುದು.