Home » ಆಡಳಿತ ವೈಫಲ್ಯ ಮರೆಮಾಚುವ ಹುನ್ನಾರ
 

ಆಡಳಿತ ವೈಫಲ್ಯ ಮರೆಮಾಚುವ ಹುನ್ನಾರ

ಕುಯಿಲಾಡಿ

by Kundapur Xpress
Spread the love
‘ಉಡುಪಿ : ಒಂದೇ ವರ್ಗದ ಓಲೈಕೆ ತನ್ನ ಜನ್ಮಸಿದ್ಧ ಹಕ್ಕು’ ಎಂಬಂತೆ ವರ್ತಿಸುತ್ತಿರುವ ಸಿ.ಎಂ. ಸಿದ್ಧರಾಮಯ್ಯ ಅವರ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯವನ್ನು ಮರೆಮಾಚುವ ಹುನ್ನಾರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ನಕಲಿ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಾ ರಾಜ್ಯದ ಖಜಾನೆಯನ್ನು ಬರಿದಾಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವ ವಿಫಲ ಯತ್ನದ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ರಾಜಕೀಯ ಬೆರೆಸಿ ಕಲುಷಿತಗೊಳಿಸಲು ಮುಂದಾಗಿರುವುದು ಖಂಡನೀಯ. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಈ ಹಿಂದೆ ಭುಗಿಲೆದ್ದ ವಿವಾಧ ಪ್ರಸಕ್ತ ಶಾಂತವಾಗಿರುವುದನ್ನು ಸಹಿಸದ ಸಿದ್ಧರಾಮಯ್ಯ ನ್ಯಾಯಾಲಯದ ತೀರ್ಪನ್ನು ಅವಗಣಿಸಿ ಕೇವಲ ರಾಜಕೀಯ ದುರುದ್ದೇಶದಿಂದ ಧರ್ಮ ಧರ್ಮಗಳ ಮದ್ಯೆ ಬೆಂಕಿ ಹಚ್ಚುವ ದುಷ್ಕೃತ್ಯಕ್ಕೆ ಮುಂದಾಗಿರುವುದು ಟಿಪ್ಪು ಮನಸ್ಥಿತಿಯನ್ನು ಮೇಳೈಸಿದಂತಿದೆ.
ಹಲವಾರು ದೊoಬಿ, ಗಲಭೆಗಳಿಗೆ ಕಾರಣರಾಗಿದ್ದ ನೂರಾರು ಮತಾಂಧ ಪಿಎಫ್ಐ ಕಾರ್ಯಕರ್ತರ ಪ್ರಕರಣಗಳನ್ನು ಹಿoಪಡೆದು ಜೈಲಿನಿಂದ ಬಿಡುಗಡೆ ಭಾಗ್ಯ ನೀಡಿರುವುದು ಸಿದ್ಧರಾಮಯ್ಯ ಸಾಧನೆ. ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಘಂಟಾಘೋಷವಾಗಿ ಘೋಷಿಸಿದ್ದ ಸಿದ್ಧರಾಮಯ್ಯ, ಹಿಂದಿನ ಅವಧಿಯಲ್ಲಿ ಮುಜರಾಯಿ ಇಲಾಖೆಯಿಂದ ಅನುದಾನ ಮಂಜೂರಾಗಿದ್ದ ಮಠ, ಮಂದಿರ, ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಒಡ್ಡಿರುವುದು ವಿಪರ್ಯಾಸ.
ಒಂದು ವರ್ಗದ ತುಷ್ಟೀಕರಣಕ್ಕಾಗಿ ಹಿಜಾಬ್ ನಿಷೇಧ ರದ್ದು ಪಡಿಸಿದರೆ, ಇನ್ನೊಂದು ವರ್ಗದ ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲು ಪವಿತ್ರ ಮಂಗಲಸೂತ್ರ, ಕಾಲುಂಗುರ ತೆಗೆದಿಡಬೇಕು ಎಂಬುದು ಸಿದ್ದರಾಮಯ್ಯ ನೇತೃತ್ವದ ತುಘಲಕ್ ಸರಕಾರದ ದ್ವಿಮುಖ ನೀತಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದ ವೈಶಿಷ್ಟ್ಯತೆ ಏನು ಎಂಬುದನ್ನು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ. ಒಂದೇ ವರ್ಗದ ಮುಖ್ಯಮಂತ್ರಿ ಎಂಬಂತೆ ಬಿಂಬಿಸಿಕೊಂಡಿರುವ ಸಿದ್ಧರಾಮಯ್ಯನವರಿಗೆ ವಿಶ್ವ ನಾಯಕ ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ.
ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಸಾರುವ ಉದ್ದೇಶದಿಂದ ಜಾರಿಗೆ ತಂದಿರುವ ವಸ್ತ್ರ ಸಂಹಿತೆಯಿಂದ ವಿದ್ಯಾರ್ಥಿಗಳು ಸಮಾನ ಭಾವದಿಂದ ವಿದ್ಯಾರ್ಜನೆಗೈಯುತ್ತಿದ್ದು, ಸಿದ್ಧರಾಮಯ್ಯ ಅವರ ಹಿಜಾಬ್ ಪರ ಹೇಳಿಕೆ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿ ಮೂಡಿಸಿದಂತಾಗಿದೆ. ಜನತೆ ರಾಜ್ಯ ಸರಕಾರದ ಆಡಳಿತ ವೈಫಲ್ಯ ಮತ್ತು ಅತಿರೇಕದ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೆಸ್ಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

Related Articles

error: Content is protected !!