ಆತ್ಮವಿಶ್ವಾಸ ನಮಗೆ ಏಕೆ ಬೇಕು? ಇದನ್ನು ನಾವು ಮೊದಲಾಗಿ ತಿಳಿಯಬೇಕು. ಆತ್ಮವಿಶ್ವಾಸವನ್ನು ಹೊಂದುವ ಮೂಲಕವೇ ನಮ್ಮಲ್ಲಿ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಶಕ್ತಿಗಳ ತ್ರಿವೇಣಿ ಸಂಗಮವಾಗುತ್ತದೆ. ಆತ್ಮವಿಶ್ವಾಸದಿಂದ ಹೊರ ಚಿಮ್ಮಿ ಬರುವ ದಿವ್ಯವಾದ ಆತ್ಮಶಕ್ತಿಯು ಬುದ್ಧಿ, ಮನಸ್ಸು ಹಾಗೂ ದೇಹವನ್ನು ವಿಕಸಿಸುತ್ತದೆ. ಅವು ಆತ್ಮಜ್ಞಾನದ ಬೆಳಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯವೆಸಗುವ ಸಾಮರ್ಥ್ಯವನ್ನು ಪಡೆಯುತ್ತವೆ. ಬುದ್ಧಿಯ ವಿವೇಕಯುಕ್ತ ಕಾರ್ಯವಿಧಾನದಲ್ಲಿ ಮನಸ್ಸು ವಿಷಯಾಸಕ್ತಿಗಳಿಂದ ಮುಕ್ತಿಹೊಂದಿ ಎಲ್ಲರಲ್ಲೂ ಎಲ್ಲದರಲ್ಲೂ ದೇವರನ್ನೇ ಕಾಣುತ್ತಾ ಪರಮಾತ್ಮನ ಪ್ರೀತ್ಯರ್ಥವಾಗಿಯೇ ತಾನು ಆತನ ಸೇವೆಯಲ್ಲಿ ನಿರತನಾಗಿದ್ದೇನೆ ಎಂಬ ಪುನೀತ ಭಾವವನ್ನು ಬೆಳೆಸಿಕೊಂಡು ಕ್ರಿಯಾಶೀಲವಾಗುತ್ತದೆ. ದೇಹವು ತಾನು ದೇವರ ಸೇವೆಗಾಗಿಯೇ ಹೇಳಿ ಮಾಡಿಸಿದ ಪರಿಕರವೆಂಬ ಭಾವನೆಯಲ್ಲಿ ಆಲಸ್ಯಗಳಿಂದ ಸಂಪೂರ್ಣ ಮುಕ್ತವಾಗಿ, ಶ್ರದ್ಧಾಭಕ್ತಿಯಿಂದ ಸೇವಾಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಆತ್ಮವಿಶ್ವಾಸದ ಒಟ್ಟು ಫಲವಾಗಿ ದೇಹ, ಮನಸ್ಸು ಹಾಗೂ ಬುದ್ಧಿಯಲ್ಲಿ ದಿವ್ಯವಾದ ಆತ್ಮಶಕ್ತಿಯು ಪ್ರವಹಿಸುತ್ತಿರುತ್ತದೆ. ಆದುದರಿಂದ ಆತ್ಮವಿಶ್ವಾಸವನ್ನು ನಾವು ಬೆಳೆಸಿಕೊಳ್ಳದೇ ಹೋದರೆ ನಮಗೆ ನಮ್ಮ ಮೇಲೆಯೇ ವಿಶ್ವಾಸ ಮೂಡದು. ಹಾಗಿರುವಾಗ ದೇವರಲ್ಲಿ ನಮಗೆ ವಿಶ್ವಾಸ ಮೂಡುವುದಾದರೂ ಹೇಗೆ? ಆತ್ಮವಿಶ್ವಾಸವನ್ನು ಹೊಂದುವ ಮೂಲಕ ನಿರಾಯಾಸವಾಗಿ ನಾವು ದೇವರಲ್ಲಿ ಭಕ್ತಿ, ಶ್ರದ್ಧೆ, ವಿಶ್ವಾಸವನ್ನು ಹೊಂದಬಹುದು. ನಮ್ಮ ಮೇಲೇ ನಮಗೆ ವಿಶ್ವಾಸವಿಲ್ಲದಿದ್ದರೆ ನಮ್ಮ ಇಡಿಯ ಬಾಳು ನಮ್ಮ ಪಾಲಿಗೆ ಗೊಂದಲಮಯವಾಗುವುದು. ಯಾರಲ್ಲೂನಮಗೆ ವಿಶ್ವಾಸ ಉಂಟಾಗದು. ತಾಯಿ, ತಂದೆ, ಗಂಡ, ಹೆಂಡತಿ, ಮಕ್ಕಳು, ಬಂಧುಗಳು ಹೀಗೆ ಎಲ್ಲರನ್ನೂ ಅವಿಶ್ವಾಸದಿಂದ ಕಾಣುವೆವು. ಅಂತಹ ಬದುಕಿಗಿಂತ ಘನ ಘೋರವಾದ, ದುರಂತಮಯವಾದ ನರಕ ಸದೃಶ ಬದುಕು ಬೇರೊಂದಿರದು!