ಈ ದೇವರ ಕುರಿತಾಗಿ ನಾವು ಏಕೆ ಚಿಂತನೆ ನಡೆಸಬೇಕು ಎಂದು ಕೆಲವರು ಹೇಳಬಹುದು. ಪ್ರಾಪಂಚಿಕ ಬದುಕಿನಲ್ಲಿ ನಮ್ಮೆಲ್ಲ ವ್ಯವಹಾರಗಳು ಮನುಷ್ಯರೊಂದಿಗೆಯೇ ವಿನಾ ದೇವರೊಂದಿಗಲ್ಲ, ಅಸತ್ಯ, ಹಿಂಸೆ, ಕ್ರೌರ್ಯ, ಮೋಸ, ವಂಚನೆ, ಕಪಟ ಇತ್ಯಾದಿ ಗಳಿಂದಲೇ ತುಂಬಿರುವ ಈ ಪ್ರಪಂಚದಲ್ಲಿ ಎಷ್ಟರಮಟ್ಟಿಗೆ ಜಾಗರೂಕರಾಗಿರುವೆವೋ ಅಷ್ಟರಮಟ್ಟಿಗೆ ಒಳ್ಳೆಯದು. ಈ ದುರ್ಗುಣಗಳಿಂದ ತುಂಬಿದ ವ್ಯಕ್ತಿಗಳೊಡನೆ ವ್ಯವಹರಿಸುವಾಗ ನಮಗೆ ಅವರಂತೆ ‘ವ್ಯವಹಾರ ಜ್ಞಾನ’ ಇರಬೇಕಾಗುತ್ತದೆ. ಅದು ಬಿಟ್ಟು ಸತ್ಯ, ನ್ಯಾಯ, ಅಹಿಂಸೆಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದರೆ ನಮ್ಮಲ್ಲಿ ‘ಕಿಲ್ಲರ್ ಇನ್ಸ್ಟಿಂಕ್ಸ್’ ಬರುವುದಾದರೂ ಹೇಗೆ? ಮತ್ತೊಬ್ಬರು ನಮಗೆ ಮಾಡುವ ಮೋಸ, ಕಪಟ, ಅನ್ಯಾಯಗಳನ್ನು ನಾವು ಮುಂಚಿತವಾಗಿ ತಿಳಿದುಕೊಳ್ಳುವುದಾದರೂ ಹೇಗೆ? ಆದುದರಿಂದ ನಾವು ವ್ಯವಹಾರಜ್ಞಾನ ಸಂಪನ್ನರಾಗುವುದು ಅಗತ್ಯ! ಮೇಲ್ನೋಟಕ್ಕೆ ಈ ವಾದ ಸರಿಯೆಂದು ಅನಿಸಬಹುದು. ಆದರೆ ಇದು ನೆಗೆಟಿವ್ ಧೋರಣೆ. ನಿಜಕ್ಕಾದರೆ ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ವನ್ನು ಸಾಧಿಸುವ ಗುರಿ ನಮ್ಮದಾಗಿರುವುದು ಒಳ್ಳೆಯದು. ಅದರಿಂದ ನಮಗೂ ಸಮಾಜಕ್ಕೂ ಒಳಿತಾಗುವುದು. ಈಚೆಗೆ ಕೆಲವೊಂದು ಬಸ್ಸುಗಳಲ್ಲಿ ಡೈವರನ ಹಿಂಭಾಗದಲ್ಲಿ ಒಂದು ಬರಹ ರಾರಾಜಿಸುತ್ತಿರುವುದನ್ನು ಹಲವರು ಕಂಡಿರಬಹುದು. ಅದು ಹೇಳುತ್ತದೆ: “ನಿಮ್ಮ ನೀತಿಗೆ ತಕ್ಕ ನಮ್ಮ ಪ್ರೀತಿ.’ ನಾಗರಿಕ ಜೀವನದಲ್ಲಿ ಮನುಷ್ಯರ ನಡುವಿನ ವ್ಯವಹಾರ ಹೇಗಿರಬೇಕು ಎನ್ನುವುದನ್ನು ಇಲ್ಲಿ ಐದೇ ಶಬ್ದಗಳಲ್ಲಿ ಹೇಳಲಾಗಿದೆ. ನಾವು ಹೇಗೋ ಹಾಗೆ ನಮ್ಮ ಪ್ರಪಂಚ. ನಾವು ಒಳ್ಳೆಯವರಾದರೆ ನಮ್ಮ ಸಂಸರ್ಗದಲ್ಲಿ ಬರುವವರು ಕೂಡ ಹಾಗೆಯೇ ವರ್ತಿಸುವರು. ಎಲ್ಲೋ ಕೆಲವು ಅಪವಾದಗಳಿರಬಹುದು. ಆದರೂ ನಮ್ಮ ನಡೆ, ನುಡಿ, ಆಚಾರ, ವಿಚಾರ ಇತ್ಯಾದಿಗಳನ್ನು ಅವಲಂಬಿಸಿಯೇ ಇತರರೊಂದಿಗಿನ ನಮ್ಮ ವ್ಯವಹಾರವು ರೂಪುಗೊಳ್ಳುತ್ತದೆ. ಮಹಾತ್ಮಾ ಗಾಂಧೀಜಿಯವರು ಒಂದೆಡೆ ಹೇಳುತ್ತಾರೆ ನಿಮ್ಮ ಸ್ನೇಹಿತರು ಯಾರೆಂದು ಒಮ್ಮೆ ನೀವು ನನಗೆ ತೋರಿಸಿ. ಆಮೇಲೆ ನೀವು ಏನು, ಹೇಗೆ ಎಂದು ನಾನು ಹೇಳುವೆ.