Home » ಸಂಗೀತದ ರಸದೌತಣ ನೀಡುವ ಇನಿದನಿಗೆ ಕ್ಷಣಗಣನೆ
 

ಸಂಗೀತದ ರಸದೌತಣ ನೀಡುವ ಇನಿದನಿಗೆ ಕ್ಷಣಗಣನೆ

by Kundapur Xpress
Spread the love

ಕುಂದಾಪುರ : ಏನೂ ಮನೋರಂಜನೆ ಇಲ್ಲದ ಆ ಕಾಲದಲ್ಲಿ ಚಲನಚಿತ್ರ, ಯಕ್ಷಗಾನ ಅಲ್ಲಲ್ಲಿ ನೆಡೆಯುವ ನಾಟಕಗಳು ಇದೇ ಅಂತಾದರೆ ಬಹಳ ಖುಷಿಯಿಂದ, ಸಡಗರದಿಂದ ಅದನ್ನು ಕಾಣಲು ತೆರಳುವ ಕಾಲವೊಂದಿತ್ತು. ನಂತರದಲ್ಲಿ ಗಣೇಶ ಚತುರ್ಥಿ, ನವರಾತ್ರಿ ಉತ್ಸವ, ಊರಿನ ರಥೋತ್ಸವ ಇತ್ಯಾದಿ ಸಂದರ್ಭಗಳಲ್ಲಿ ಸ್ಥಳೀಯ ಸಂಘಟನೆಗಳು ಆರ್ಕೆಸ್ಟ್ರಾ ತಂಡಗಳನ್ನು ಕರೆಯಿಸಿ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದನ್ನು ನೋಡಲು ಕೇಳಲು ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಅಲ್ಲಿ ಮಿಮಿಕ್ರಿ, ನೃತ್ಯ, ಹಾಸ್ಯ ಇತ್ಯಾದಿಗಳು ನಡೆಯುತ್ತಿತ್ತು. ಅದಲ್ಲದೆ ಅಲ್ಲಿ ಸೇರಿದ ಪ್ರೇಕ್ಷಕರು ತಮ್ಮ ಬೇಡಿಕೆಯ ಹಾಡುಗಳನ್ನು ಕಲಾವಿದರಿಂದ ಹಾಡಿಸುತ್ತಿದ್ದರು. ಒಟ್ಟಿನಲ್ಲಿ ಆರ್ಕೆಸ್ಟ್ರಾ ಅಂದರೆ ಸಹಸ್ರ ಸಂಖ್ಯೆಯಲ್ಲಿ ಜನರು ಸೇರಿ ಸಂಭ್ರಮಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲಕ್ರಮೇಣ ಚಲನಚಿತ್ರ ಗೀತೆಗಳಲ್ಲಿ ಸಾಹಿತ್ಯಕ್ಕೆ ಮಹತ್ವ ಕಡಿಮೆಯಾಗಿ ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಾಗಿ ಹಳೆಯ ಗೀತೆಗಳ ಮಾಧುರ್ಯ ಕಡಿಮೆಯಾದಾಗ ಕೇಳುಗರು ಆರ್ಕೆಸ್ಟ್ರಾ ನೋಡುವುದನ್ನು, ಕೇಳುವುದನ್ನು ಕಡಿಮೆ ಮಾಡುತ್ತಾ ಬಂದರು.

ಹೀಗಿರುವಾಗ 2010 ರಲ್ಲಿ ಇನಿದನಿ ವಿನೂತನ ರೀತಿಯ ಸಂಗೀತ ರಸಮಂಜರಿಯೊಂದು ವಿಭಿನ್ನ ಶೈಲಿಯೊಂದಿಗೆ ಕುಂದಾಪುರಕ್ಕೆ ಪರಿಚಯಿಸಲ್ಪಟ್ಟಿತ್ತು. ಅದರಲ್ಲಿ 70-80 ರ ದಶಕದ ಕನ್ನಡ ಚಲನಚಿತ್ರದ ಹಾಡುಗಳನ್ನಷ್ಟೇ ಹಾಡಿಸಲಾಗುತ್ತಿತ್ತು. ಈ ಕಾರ್ಯಕ್ರಮವು ಸಂಗೀತದ ಮೇಲಿನ ಶ್ರದ್ಧೆ ಮತ್ತು ಪ್ರಾಮಾಣಿಕತೆಯ ಪ್ರತೀಕ, ಅಚ್ಚುಕಟ್ಟಾದ ಆಯೋಜನೆ, ಮಿಮಿಕ್ರಿ ಇಲ್ಲದ, ಡ್ಯಾನ್ಸ್ ಇಲ್ಲದ, ಸಂಗೀತದ ವಿಷಯ ಬಿಟ್ಟು ಇನ್ನೇನನ್ನು ಮಾತನಾಡದಿರುವ, ಪರಿಶುದ್ಧವಾದ ಸಂಗೀತ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನಿದನಿಯಿಂದ ಮನಸೂರೆಗೊಂಡ ಪ್ರೇಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಯಿತು. 2010 ರಲ್ಲಿ 150 ಮಂದಿ ಪ್ರೇಕ್ಷಕರಿದ್ದ ಇನಿದನಿಗೆ ಇದೀಗ 8 ಸಾವಿರಕ್ಕೂ ಅಧಿಕ ಮಂದಿ ಕೇಳುಗರು ಸೇರುತ್ತಾರೆ. ಮುಂದಿನ ವರ್ಷದ ಇನಿದನಿಗಾಗಿ ಕಾತುರದಿಂದ ಕಾಯುತ್ತಾರೆ. ಒಟ್ಟಿನಲ್ಲಿ ಇನಿದನಿ ಎಂದರೆ ಶಿಸ್ತುಬದ್ದವಾದದ್ದು, ಸಮಯಪಾಲನೆ ಮಾಡುವಂತದ್ದು ಎಂಬ ಖ್ಯಾತಿಗೆ ಒಳಗಾಗಿದೆ ಈ ಇನಿದನಿಯ ನೇತೃತ್ವದ ಹೊಣೆ ಹೊತ್ತದ್ದು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್. ಸಾಂಸ್ಕøತಿಕ ಬೇರುಗಳನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಕಾಳಜಿಯ ಪ್ರತಿರೂಪವಾದ ಕಲಾಕ್ಷೇತ್ರ ಸಂಸ್ಥೆಯು ಈಜು ತರಬೇತಿ, ಸುಗಮ ಸಂಗೀತ ತರಬೇತಿ, ಕನ್ನಡ ರಾಜ್ಯೋತ್ಸವ ಆಚರಣೆ, ವಿಚಾರ ಸಂಕಿರಣ, ಚಲನಚಿತ್ರ ಪ್ರದರ್ಶನ, ಯಕ್ಷಗಾನ, ತಾಳಮದ್ದಲೆ, ಹುಲಿವೇಷ ನೃತ್ಯ ಆಯೋಜನೆ, ಕುಂದಾಪ್ರ ಕನ್ನಡ ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕುಂದಾಪುರದ ಜನತೆಗೆ ನೀಡುತ್ತಲೇ ಬಂದಿದೆ.

ಜನವರಿ 14 ರಂದು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ಮಂಟಪದಲ್ಲಿ ನಡೆಯುವ 12ನೇ ವರ್ಷದ ಇನಿದನಿಗೆ ವೇದಿಕೆ ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಗಾಯಕ/ಗಾಯಕಿಯರಾದ ಅಜೇಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನೀಲ್, ಸಮನ್ವಿತಾ ಶರ್ಮ, ಭಾಗವಹಿಸಲಿದ್ದಾರೆ, ಇವರೊಂದಿಗೆ ಮಂಗಳೂರಿನ ವೈ ಎನ್. ರವೀಂದ್ರ, ಸ್ಥಳೀಯರಾದ ಅಶೋಕ ಸಾರಂಗ್, ಯುವ ಪ್ರತಿಭೆ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ ಹಾಗೂ ಕಮಲ್ ಕಿಶೋರ್ ಕುಂದಾಪುರ ಭಾಗವಹಿಸಲಿದ್ದು, ಹಿಮ್ಮೇಳದಲ್ಲಿ ರಾಜೇಶ್ ಭಾಗವತ್-ತಬಲಾ, ವಾಮನ್ ಕಾರ್ಕಳ-ಪ್ಯಾಡ್ ಮತ್ತು ಡ್ರಮ್ಸ್, ಗಣೇಶ್ ನವಗಿರಿ-ಕಾಂಗೋ, ಭಾಸ್ಕರ ಕುಂಬ್ಳೆ-ಡೋಲಕ್, ಶಿಜಿಮೂನ್ ಕ್ಯಾಲಿಕಟ್ ಹಾಗೂ ದೀಪಕ್ ಶಿವಮೊಗ್ಗ-ಕೀಬೋರ್ಡ್, ವರುಣ್-ಕೊಳಲು, ಸುಮುಖ್ ಆಚಾರ್ಯ-ಸಿತಾರ್, ಮೆಲ್ವಿನ್-ಟ್ರಂಪೆಟ್, ಟೋನಿ ಡಿ’ಸಿಲ್ವ ಬೇಸ್ ಗಿಟಾರ್ ಮತ್ತು ಮಂಗಳೂರಿನ ರಾಜ್‍ಗೋಪಾಲ ಆಚಾರ್ಯ- ಗಿಟಾರ್ ನುಡಿಸಲಿದ್ದು ತಂಡದ ನೇತೃತ್ವ ವಹಿಸಲಿದ್ದಾರೆ. ಈ ಹಿಂದಿನ ಸಾಲಿನಲ್ಲಿ ಸಂಗೀತ ನಿರ್ದೇಶಕ ಮತ್ತು ನಟ ವಿ. ಮನೋಹರ್, ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ, ಆನಂದ ಸಿ ಕುಂದರ್, ಖ್ಯಾತ ಚಲನಚಿತ್ರ ನಟ ರಮೇಶ್ ಭಟ್ ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ, ಕರ್ನಾಟಕ ಬ್ಯಾಂಕ್‍ನ ನಿಕಟಪೂರ್ವ ಅಧ್ಯಕ್ಷರಾದ ಮಹಾಬಲೇಶ್ವರ ಎಂ.ಎಸ್, ಉದ್ಯಮಿ ಮಣಿಪಾಲ್ ಇನ್ ಮಾಲಕ ಇಬ್ರಾಹಿಂ ಮೌಲಾನಾ ಮುಂತಾದ ಹಲವಾರು ಗಣ್ಯರು ಇನಿದನಿಗೆ ಸಾಕ್ಷಿಯಾಗಿದ್ದಾರೆ.
ಈ ಬಾರಿಯ ಇನಿದನಿಗೆ ಸಂಗೀತ ಪ್ರೇಮಿಗಳು ಹೆಚ್ಚಿ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

   

Related Articles

error: Content is protected !!