ಮಂಗಳೂರು : ಜ.18ರಂದು ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪೂಜ್ಯ ಸುಗುಣೇಂದ್ರತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಕಿರಿಯ ಸ್ವಾಮೀಜಿ ಪೂಜ್ಯ ಸುಶೀಂದ್ರತೀರ್ಥ ಸ್ವಾಮೀಜಿ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಸ್ವಾಮೀಜಿದ್ವಯರು ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಆಶೀರ್ವಚನ ನೀಡಿದರು. ಕ್ಷೇತ್ರದ ಸಂಪ್ರದಾಯದಂತೆ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಲಾಯಿತು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯವರಿಗೆ ಭಕ್ತಿಪೂರ್ವಕ ಸ್ವಾಗತಕೋರಿ ಪೂಜ್ಯರ ಪರ್ಯಾಯ ಪೀಠಾರೋಹಣ ಹಾಗೂ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿ ಅವರ ಅನುಗ್ರಹವನ್ನು ಕೋರಿದರು. ತಮಗೂ ಪೂಜ್ಯ ಸ್ವಾಮೀಜಿಯವರಿಗೂ ಕಳೆದ 40 ವರ್ಷಗಳಿಂದ ಇರುವ ಅವಿನಾ ಭಾವ ಸಂಬಂಧವನ್ನು ಸ್ಮರಿಸಿ ಪರ್ಯಾಯ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಮಾಡಲು ತಮಗೆ ಅವಕಾಶ ದೊರಕಿರುವುದು ವಿಶೇಷ ಸಂತೋಷ ಮತ್ತು ಧನ್ಯತಾಭಾವವನ್ನು ಮೂಡಿಸಿದೆ ಎಂದರು. ಧರ್ಮಸ್ಥಳದ ವತಿಯಿಂದ ಸ್ವಾಮೀಜಿಯವರನ್ನು ಹೆಗ್ಗಡೆಯವರು ಗೌರವಿಸಿದರು