ಕಾಣಲು ಸಿಗದ ದೇವರ ಬಗ್ಗೆ ವಿಶ್ವಾಸ, ನಂಬಿಕೆ, ಭಯ, ಭಕ್ತಿಯನ್ನು ಬೆಳೆಸಿ ಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಕಣ್ಣ ನೋಟಕ್ಕೆ ಕಂಡು ಬಾರದ ಯಾವುದರ ಅಸ್ತಿತ್ವವನ್ನೂ ನಾವು ಪರಿಗಣಿಸುವುದಿಲ್ಲವೆಂದು ಹಠ ಹಿಡಿದರೆ ನಾವು ಕಾಣದಿರುವ ನಮ್ಮ ತಾತ, ಮುತ್ತಾತರು ಹುಟ್ಟಿಯೇ ಇರಲಿಲ್ಲ ಎಂಬ ಮೊಂಡು ವಾದವನ್ನು ಸಮರ್ಥಿಸಬೇಕಾಗುತ್ತದೆ. ಹಾಗೊಮ್ಮೆ ಆ ವಾದವನ್ನು ಸಮರ್ಥಿಸಲು ಹೋದರೆ ನಮ್ಮನ್ನು ನಾವು ಅಜ್ಞಾನಿಗಳೆಂದೇ ಕರೆಸಿಕೊಳ್ಳಬೇಕಾಗುತ್ತದೆ. ದೇವರ ಸೃಷ್ಟಿಯಲ್ಲಿ ನಾವು ಕಾಣುವ ಮತ್ತು ಕಾಣಲಾಗದ ಎಲ್ಲದರಲ್ಲೂ ವ್ಯಕ್ತವಾಗಿರುವುದು ದೇವರ ಅಂಶವೇ ಹೊರತು ಬೇರೇನೂ ಅಲ್ಲ. ಸೃಷ್ಟಿ, ಸ್ಥಿತಿ, ಲಯ ಎನ್ನುವುದು ನಿರಂತರವಾಗಿ ನಡೆಯುತ್ತಲೇ ಇದೆ. ಒಮ್ಮೆ ವ್ಯಕ್ತವಾದದ್ದು ಅನಂತರ ಅವ್ಯಕ್ತವಾಗಿ ಮತ್ತೆಲ್ಲೋ ವ್ಯಕ್ತವಾಗುವ ಈ ಸೃಷ್ಟಿಯಲ್ಲಿ ಹುಟ್ಟು-ಸಾವು ಎನ್ನುವುದು ಕೇವಲ ನಮ್ಮಲ್ಲಿ ಭ್ರಮೆ ಹುಟ್ಟಿಸುವ ವಿದ್ಯಮಾನಗಳೆಂದು ನಾವು ತಿಳಿಯಬಹುದು. ಹುಟ್ಟು-ಸಾವಿನ ನಡುವೆ ನಾವು ಕಾಣುವ ಜೀವಿತದ ಅವಧಿ ಮಾತ್ರವೇ ಸತ್ಯವೆಂದು ಭಾವಿಸುವ ‘ಮಾಯೆ’ಗೆ ನಾವು ಸಿಲುಕಿಕೊಂಡಿರುವುದರಿಂದಲೇ ಪ್ರತಿಯೊಂದಕ್ಕೂ ನಾವು ಪ್ರಮಾಣವನ್ನೇ ಬಯಸುತ್ತೇವೆ. ದೇವರ ವಿಷಯದಲ್ಲೂ ಅಷ್ಟೆ! ಮಹಾನ್ ದಾರ್ಶನಿಕ, ತತ್ತ್ವಜ್ಞಾನಿ ಶ್ರೀ ಅರಬಿಂದೋ ಅವರ ಪ್ರಕಾರ ನಾವು ದೇವರ ಇರುವಿಕೆಯನ್ನು ನಮ್ಮೊಳಗೇ ಕಂಡುಕೊಳ್ಳಬೇಕು; ಹೊರಗೆಲ್ಲೂ ಅಲ್ಲ, ಏಕೆಂದರೆ ನಮ್ಮ ಒಳಗೇ ನಾವು ದೇವರನ್ನು ಪರಿಭಾವಿಸಲು ಸಾಧ್ಯವಾದಾಗ ಮಾತ್ರ ಹೊರಗಿನ ಪ್ರಕೃತಿಯಲ್ಲಿ ಎಲ್ಲೆಡೆಯೂ ದೇವರು ವ್ಯಕ್ತವಾಗಿರುವುದನ್ನು ನಾವು ಪರಿಗ್ರಹಿಸಲು ಸಾಧ್ಯವಾಗುತ್ತದೆ. ಆದುದರಿಂದ ನಮ್ಮೊಳಗೆ ಮನೆಮಾಡಿಕೊಂಡಿರುವ ದಯಾಮಯನಾದ ಆ ಭಗವಂತನಿಗೆ ನಾವು ಸಂಪೂರ್ಣವಾಗಿ ಶರಣಾಗತರಾಗಬೇಕು. ಆ ಮೂಲಕ ನಮ್ಮನ್ನು ಆವರಿಸಿಕೊಂಡಿರುವ ಅಹಂಕಾರವೆಂಬ ಅಜ್ಞಾನದ ಪರದೆಯನ್ನು ನಾವು ಸರಿಸಬೇಕು. ಆಗ ಮಾತ್ರವೇ ಅವ್ಯಕ್ತನೂ ವ್ಯಕ್ತನೂ ಆಗಿರುವ ಪರಮಾತ್ಮನನ್ನು ನಾವು ನಮ್ಮೊಳಗೂ ಹೊರಗೂ ಕಾಣಬಹುದು!