ಕುಮಟಾ: ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಾಶವಾಗಲಿದೆ ಎಂದು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕೆಲವೇ ದಿನ ಬಾಕಿ ಇರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.
ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ಬಾಬ್ರಿ ಮಸೀದಿ ನಿರ್ನಾಮವಾದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಆಗಲಿದೆ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ. ಶಿರಸಿಯ ಸಿಪಿ ಬಜಾರ್ನಲ್ಲಿಯೂ ಮಸೀದಿ ಇದೆ. ಅದು ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು. ಇವತ್ತೂ ಅಲ್ಲಿಗೆ ಹೋದರೆ ಮಾರುತಿ ದೇವಸ್ಥಾನ ಕಾಣುತ್ತದೆ ಎಂದು ಅನಂತಕುಮಾರ್ ಹೇಳಿದ್ದರು
ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಹಾಗೂ ದ್ವೇಷದ ಭಾಷಣ ಮಾಡಿದ ಅರೋಪದಲ್ಲಿ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ದ ಕುಮಟಾ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ