ದಾರ್ಶನಿಕ ಶ್ರೀ ಅರಬಿಂದೋ ಹೇಳುತ್ತಾರೆ : ನಮ್ಮೊಳಗೆ ನೆಲೆಸಿರುವ ದೇವರನ್ನು ಕಾಣಲು ಮೊತ್ತ ಮೊದಲಾಗಿ ನಾವು ನಮ್ಮಲ್ಲಿ ತುಂಬಿಕೊಂಡಿರುವ ಆಸೆಗಳ ಖಜಾನೆಯನ್ನು ಪೂರ್ತಿಯಾಗಿ ಖಾಲಿ ಮಾಡಬೇಕು. ಮನಸ್ಸಿನೊಳಗೆ ಯಾವ ಆಸೆಗಳನ್ನೂ ಇಟ್ಟುಕೊಳ್ಳಬಾರದು. ಯಾವ ಬೇಡಿಕೆಗಳನ್ನೂ ಕಟ್ಟಿಕೊಳ್ಳಬಾರದು. ಆಸೆಗಳು ಯಾವತ್ತೂ ನಮ್ಮಲ್ಲಿ ಅತೃಪ್ತಿ, ಅಸಮಾಧಾನವನ್ನು ಹೆಚ್ಚಿಸುತ್ತವೆ. ‘ಇದಮಿತ್ಥಂ’ ಎನ್ನುವ ಯಾವ ತೀರ್ಪನ್ನು ಕೂಡ ಕೊಡುವ ಅಹಂಕಾರವನ್ನು ಬೆಳೆಸಿಕೊಳ್ಳಬಾರದು. ಮನಸ್ಸಿನೊಳಗಿರುವ ದ್ವಂದ್ವಗಳನ್ನು ಒಂದೊಂದಾಗಿಯೇ ಕಳಚಿಕೊಳ್ಳಬೇಕು. ದೇವರ ಕುರಿತಾದ ಸಂದೇಹಗಳನ್ನು ದೂರಮಾಡಿಕೊಳ್ಳಬೇಕು. ಕಣ್ಣಿಗೆ ಗೋಚರವಾಗುವ ಮತ್ತು ಅಗೋಚರವಾಗಿರುವ ಜಗತ್ತನ್ನು ಏಕಪ್ರಕಾರವಾಗಿ ಪರಿಭಾವಿಸಿ ಎಲ್ಲೆಲ್ಲೂ ದೇವರೇ ತುಂಬಿಕೊಂಡಿದ್ದಾನೆ ಎಂಬ ವಿಶ್ವಾಸವನ್ನು ತಳೆಯಬೇಕು. ಮೋಟಾರು ವಾಹನದ ಇಂಜಿನ್ ಎಷ್ಟೇ ಸಶಕ್ತವಾದರೂ ಅದು ತನ್ನನ್ನು ಪೂರ್ತಿಯಾಗಿ ಚಾಲಕನಿಗೆ ಒಪ್ಪಿಸಿಕೊಂಡು ಆತನು ನಿಯಂತ್ರಿಸಿದಂತೆ ಹೇಗೆ ವಿಧೇಯತೆಯಿಂದ ನಡೆದುಕೊಳ್ಳುವುದೋ ಹಾಗೆಯೇ ನಾವು ನಮ್ಮೊಳಗೆ ಚಾಲಕ ಶಕ್ತಿಯ ರೂಪದಲ್ಲಿ ನೆಲೆಸಿರುವ ದೇವರಿಗೆ ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿ ಕೊಳ್ಳಬೇಕು. ಆತನ ನಿಯಂತ್ರಣದಲ್ಲಿ ಮಾತ್ರವೇ ಮನಸ್ಸು ಹಾಗೂ ಬುದ್ಧಿಯನ್ನು ಒಳಗೊಂಡ ದೇಹವೆಂಬ ನಮ್ಮ ವಾಹನವು ಸರಿಯಾದ ಹಾದಿಯಲ್ಲಿ ನಿರ್ವಿಘ್ನವಾಗಿ ಸಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಾ ಮೋಕ್ಷದ ಗುರಿಯನ್ನು ಸೇರಬಲ್ಲುದು. ನಾನೆಂದರೆ ದೇಹವೂ ಅಲ್ಲ, ಮನಸೂ ಅಲ್ಲ, ಬುದ್ದಿಯೂ ಅಲ್ಲ ಸಂಪೂರ್ಣವಾಗಿ ದೇವರ ಅಂಶವೇ ನಾನಾಗಿ ವ್ಯಕ್ತವಾಗಿದೆ ಎಂಬ ಜ್ಞಾನವನ್ನು ಪಡೆದಾಗ ನಮ್ಮೊಳಗಿನ ದೇವರೇ ಸಾಧಕನಾಗುವನು; ಆದುದರಿಂದ ನಮ್ಮೊಳಗಿನ ದೇವರ ಅಂಶವನ್ನು ಕಂಡುಕೊಳ್ಳಲು ನಡೆಸುವ ಪ್ರಯತ್ನದಲ್ಲೇ ಮೋಕ್ಷಸಾಧನೆಯ ಮಾರ್ಗ ತೆರೆದುಕೊಳ್ಳುವುದು.