ಉಡುಪಿ : ಪ್ರತಿಯೊಬ್ಬರು ತಂತಮ್ಮ ಕ್ಷೇತ್ರದಲ್ಲಿ ಗರಿಷ್ಟ ಸಾಧನೆ ಮಾಡಬೇಕು. ಅದನ್ನು ಮಾಡದೇ ಕರ್ತವ್ಯಲೋಪ ಮಾಡಿದರೇ ಅದು ಅಧರ್ಮವಾಗುತ್ತದೆ. ಅವನತಿಗೆ ಕಾರಣವಾಗುತ್ತದೆ ಎನ್ನುವುದು ಗೀತೆಯ ಅಂತಿಮ ಸಂದೇಶವಾಗಿದೆ ಎಂದು ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.ಅವರು ಗುರುವಾರ ರಾಜಾಂಗಣದಲ್ಲಿ ಸಂಧ್ಯಾ ದರ್ಬಾರ್‌ನಲ್ಲಿ ಸಾಧಕರಿಗೆ ದರ್ಬಾರ್ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸಂದೇಶ ನೀಡಿದರು.
ಪ್ರತಿಯೊಂದು ಕ್ಷೇತ್ರದ ಪ್ರತಿಯೊಬ್ಬ ಸಾಧಕನ ಹಿಂದೆ ನಾನಿದ್ದೇನೆ ಎಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಗೀತೆ ಉದ್ಯಮಿ, ರಾಜಕಾರಣಿ, ಸಾಹಿತ್ಯ, ಕಲೆ, ಕ್ರೀಡೆ, ವೈದ್ಯಕೀಯ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಸಹಾಯ ಮಾಡುತ್ತದೆ. ಅದನ್ನು ಜ್ಞಾಪನೆ ಮಾಡುವುದಕ್ಕಾಗಿಯೇ ತಾವು ಎಲ್ಲ ಕ್ಷೇತ್ರಗಳ ಸಾಧಕರನ್ನು ಈ ದರ್ಬಾರ್ ವೇದಿಕೆಗೆ ಕರೆದಿದ್ದೇವೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಶಾಸಕ ಬಸವಗೌಡ ಯತ್ನಾಳ್, ಮಾಜಿ ಸಚಿವ ಜನಾರ್ದನ ರೆಡ್ಡಿ, ಮುಂಬೈಯ ಶಾಸಕ ಹಿತೇಂದ್ರ ಠಾಕೂರ್, ಮುಂಬೈ ಇಸ್ಕಾನ್ ಅಧ್ಯಕ್ಷ ಕಮಲಲೋಚನ ಪ್ರಭು, ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಸಂತೋಷ್ ಶೆಟ್ಟಿ ಪೂನಾ, ಆಸ್ಟ್ರೇಲಿಯಾದ ಮಾಜಿ ಸಚಿವ ಡ್ಯೂಕ್ ಡನಲೆನ್, ದ.ಕ. ಜಿಲ್ಲಾ ಮೀನುಗಾರ ಮಹಾಸಭಾದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬ್ಯಾಂಕ್ ಆಫ್ ಬರೋಡದ ಅಧಿಕಾರಿ ಗಾಯತ್ರಿದೇವಿ, ಸಿನಿಮಾ ಕಲಾವಿದೆ ರೂಪಾ ಗುರುರಾಜ್ ಆಗಮಿಸಿದ್ದರು