Home » ಶಾಂತ ಮನಸ್ಸು
 

ಶಾಂತ ಮನಸ್ಸು

by Kundapur Xpress
Spread the love

ಇಡಿಯ ದೇಹವೇ ಸಿಟ್ಟು, ಅಸಹನೆ, ಉದ್ವೇಗಗಳನ್ನು ಗೆಲ್ಲಲು ಸಾಧ್ಯವಾಗುವುದು ಶಾಂತ ಮನಸ್ಸಿನಿಂದ ಮಾತ್ರ. ಅಂದರೆ ಮನಸ್ಸಿನ ಈ ಮೂಲ ಸಹಜ ಸ್ವಭಾವದಿಂದ ಬಾಹ್ಯ ಪ್ರಭಾವದಿಂದ ಒಳನುಸುಳಿ ಬರುವ ಕ್ರೋಧವೆಂಬ ವೈರಿಯನ್ನು ನಾವು ನಮ್ಮ ಮನಸ್ಸಿನಿಂದ ಹೊರಗೆ ಹಾಕಬಹುದು. ಮನಸ್ಸು ಶಾಂತವಾಗಿದ್ದರೆ ಅದರಿಂದ ಪ್ರಭಾವಿತವಾಗುತ್ತದೆ. ದೇಹದ ಜೀವಕೋಶಗಳಲ್ಲೆಲ್ಲ ಅದು ಪ್ರತಿಫಲಿತವಾಗುತ್ತದೆ. ಎಷ್ಟೆಂದರೆ ದೇಹದ ಭಾರವೇ ನಮ್ಮ ಅರಿವಿಗೆ ಬಾರದೆ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ಕವಿ ಪ್ರೇಮಚಂದ್ರರು ಹೇಳುವಂತೆ ಕುದಿಯುವ ನೀರಿನಲ್ಲಿ ಮುಖ ಕಾಣಿಸುವುದಿಲ್ಲ. ಅಂತೆಯೇ ಕುದಿಯುವ ಮನಸ್ಸಿಗೆ ಹಿತ ಕಾಣಿಸುವುದಿಲ್ಲ. ಯೋಗಾಭ್ಯಾಸದ ಮೂಲಕ ಪಡೆಯಬಹುದಾದ ಮನಶ್ಯಾಂತಿಯಿಂದ ದೇಹದ ಮೇಲಾಗುವ ಸತ್ಪರಿಣಾಮ ಅನನ್ಯವಾದದ್ದು. ಮನಸ್ಸಿನ ಶಾಂತಿಯ ಮೂಲಕ ನಮ್ಮೊಳಗಿನ ದೇವರನ್ನು ಅರಸುವುದು ಸುಲಭ ಸಾಧ್ಯವಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಇದನ್ನೇ ಸೂಕ್ಷ್ಮವಾಗಿ ಹೇಳುವ ಪರಿ ಅನನ್ಯ, ಕಾಮ-ಕ್ರೋಧಗಳಿಂದ ಬಿಡುಗಡೆ ಹೊಂದಿದವನಿಗೆ ಮತ್ತು ಆ ಮೂಲಕ ಮನಸ್ಸನ್ನು ವಶದಲ್ಲಿ ಇಟ್ಟು ಕೊಂಡವನಿಗೆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ನಿಶ್ಚಿತವಾಗಿಯೂ ಸಾಧ್ಯ. ಏಕೆಂದರೆ ಕಾಮ-ಕ್ರೋಧ ಗಳಿಂದ ಮುಕ್ತವಾದ ಆ ನಿರ್ಮಲ ಮನಸ್ಸು ದೇವರ ಧ್ಯಾನಕ್ಕೆ ಪಕ್ವವಾಗಿರುತ್ತದೆ. ದೇವರ ಸ್ಮರಣೆಯಲ್ಲಿ ಅದು ಸುಲಭವಾಗಿ ಕೇಂದ್ರೀಕೃತವಾಗುತ್ತದೆ. ಅನ್ಯ ವಿಷಯಗಳನ್ನು ಕುರಿತು ಆ ಮನಸ್ಸು ಯೋಚಿಸುವುದೇ ಇಲ್ಲ. ದೇವರನ್ನಲ್ಲದೆ ಬೇರೇನನ್ನೂ ಆ ಮನಸ್ಸು ಕಾಣಲು ಅಥವಾ ಪಡೆಯಲು ಬಯಸುವುದಿಲ್ಲ. ಅಂತಹ ನಿರ್ಮಲವಾದ ಮನಸ್ಸನಲ್ಲಿ ನೆಲೆ ನಿಲ್ಲಲು ದೇವರು ಇಷ್ಟಪಡುತ್ತಾನೆ. ಅಥರ್ವ ವೇದ ಹೇಳುತ್ತದೆ: ‘ಬಿಲ್ಲಿನಿಂದ ಬಾಣವನ್ನು ಬೇರ್ಪಡಿಸುವಂತೆ ನಿಮ್ಮ ಹೃದಯದಿಂದ ಸಿಟ್ಟೆನ್ನುವುದನ್ನು ಈ ಕೂಡಲೇ ತೆಗೆದು ಬಿಡಿ. ಅದರಿಂದ ನೀವು ಮತ್ತು ಹೃದಯ ಪುನಃ ನೆಚ್ಚಿನ ಸಂಗಾತಿಗಳಾಗುವುದು ಸಾಧ್ಯ. ಸಾಮರಸ್ಯದಿಂದ ಬಾಳುವುದೂ ಸಾಧ್ಯ. ಎಲ್ಲಕ್ಕಿಂತ ಮಿಗಿಲಾಗಿ ಹೃದಯ ಕಮಲದೊಳಗಿನ ದೇವರನ್ನು ಕಾಣುವುದು ಸಾಧ್ಯ!

   

Related Articles

error: Content is protected !!