ಅಯೋಧ್ಯೆ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, 6 ದಿನದಲ್ಲಿ 19 ಲಕ್ಷ ಭಕ್ತರು ಬಾಲ ರಾಮನ ದರ್ಶನ ಪಡೆದಿದ್ದಾರೆ ಎಂದು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಮಂಗಳವಾರದಿಂದ (ಜ.23ರಿಂದ) ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಮೊದಲ ದಿನ ಬರೋಬ್ಬರಿ 5 ಲಕ್ಷ ಭಕ್ತರು ದರ್ಶನ ಪಡೆದಿದ್ದರು. ಇದರ ಮುಂದುವ ರಿದ ಭಾಗವಾಗಿ ಬುಧವಾರದಿಂದ ಭಾನು ವಾರದವರೆಗೆ 13.75 ಲಕ್ಷ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ಈಗ ಒಟ್ಟು 18.75 ಲಕ್ಷ ಭಕ್ತರು ಆಗಮಿಸಿ ಬಾಲ ರಾಮನ ದರ್ಶನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ದಿನ 5 ಲಕ್ಷ ಭಕ್ತರು ಏಕಾಏಕಿ ಹರಿದು ಬಂದಿದ್ದರಿಂದ ದರ್ಶನಕ್ಕೆ ಸಮಸ್ಯೆ ಆಗಿತ್ತು. ಆದರೆ ನಂತರ ಭದ್ರತೆಯನ್ನು ಹೆಚ್ಚಿಸಿ, ರಾಮನ ಸರಾಗ ದರ್ಶನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಸರಾಸರಿ 3 ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ.