ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರ ಇನ್ನಷ್ಟು ಕೆದಕಿದರೆ ಇದು ದೇಶವ್ಯಾಪಿ ಹೋರಾಟವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ನೆಹರು ಕಾಲದಿಂದಲೂ ರಾಮನ ಮೇಲೆ ದ್ವೇಷವಿದೆ. ಆದರೀಗ ಹನುಮನ ಬಗ್ಗೆ ದ್ವೇಷ ಶುರುವಾಗಿದೆ. ಕೆರಗೋಡಿನಲ್ಲಿ 20-30 ವರ್ಷ ಗಳಿಂದ ಹನುಮ ಧ್ವಜ ಹಾರಿಸಲಾಗುತ್ತಿದೆ. ಯಾವುದೇ ಮಸೀದಿಯ ಬಳಿ ಧ್ವಜ ಹಾರಿಸಿಲ್ಲ ಪ್ರತಿ ಮನೆಯವರಿಂದ ದೇಣಿಗೆ ಸಂಗ್ರಹಿಸಿ 6 ಲಕ್ಚ ರೂಪಾಯಿ ಖರ್ಚು ಮಾಡಿ 108 ಅಡಿ ಧ್ವಜಸ್ತಂಭ ನಿರ್ಮಿಸಲಾಗಿದೆ ಇಡೀ ವರ್ಷ ಅಲ್ಲಿ ಹನುಮ ಧ್ವಜ ಹಾರಿಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸಲು ಸರ್ಕಾರ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಮರ್ಯಾದೆ ಇದ್ದರೆ ಅವರ ಅನುದಾನದಿಂದ ಕಂಬ ನಿರ್ಮಿಸಿ ಧ್ವಜ ಹಾರಿಸಬೇಕಿತ್ತು. ಹನುಮನನ್ನು ಹೇಗೆ ವಿರೋಧ ಮಾಡಬೇಕೆಂದು ಚಿಂತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವೆಂದರೇನೆ ಶಕುನಿ ಸರ್ಕಾರ, ಹನುಮ ಧ್ವಜವನ್ನು ತೆಗೆಸಲು ಸರ್ಕಾರ ರಾಷ್ಟ್ರಧ್ವಜವನ್ನು ಬಳಕೆ ಮಾಡಿದೆ. ಮೊದಲು ಯಾವ ‘ಧ್ವಜವಿತ್ತೋ ಅದೇ ಧ್ವಜವನ್ನು ಅಲ್ಲಿ ಹಾರಿಸಬೇಕು ಎಂದು ಒತ್ತಾಯಿಸಿದರು