ಕುಮಟಾ : ಸಿದ್ದರಾಮಯ್ಯನವರು ಪೂರ್ವಾಗ್ರಹ ಪೀಡಿತರಾಗಿ ಹಿಂದೂ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿಕೊಂಡಿದ್ದಾರೆ. ದುರಂಹಕಾರದಿಂದ ವರ್ತಿಸುವ ಅವರ ಬಗ್ಗೆ ಬೇಕೆಂದೇ ಏಕವಚ ನದಲ್ಲಿ ಮಾತನಾಡಿದ್ದೆ. ಅವರು ರಾಷ್ಟ್ರಪತಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಏನು ಹೇಳಬೇಕು? ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರದು ಏಕಮುಖ ನೀತಿ, ಸ್ಪಷ್ಟವಾಗಿ ಹಿಂದೂ ವಿರೋಧಿ ನೀತಿ, ಸ್ಪಷ್ಟವಾಗಿ ಅಲ್ಪಸಂಖ್ಯಾತರ ತುಷ್ಟಿಕರಣ ಕರ್ನಾಟಕ ಸರ್ಕಾರದಲ್ಲಿ ಮಿತಿಮೀರಿದೆ. ಇದು ನಿಲ್ಲಬೇಕು. ಇಲ್ಲದಿದ್ದರೆ ಇದೊಂದು ಹೊಸ ಜನಾಂದೋಲನವಾಗಿ ಬೆಳೆಯುತ್ತದೆ. ರಾಜ್ಯದ ಜನ ಅತ್ಯಂತ ಪ್ರಜ್ಞಾವಂತರು. ಕರ್ನಾಟಕದ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯನವರ ಕಾರಣದಿಂದಾಗಿ ಜನ ದೊಡ್ಡ ಪಾಠ ಕಲಿಸಲು ಹೊರಟಿದ್ದಾರೆ ಎಂದರು. ರಾಷ್ಟ್ರಪತಿಗಳ ಬಗ್ಗೆ ಅದರಲ್ಲಿಯೂ ಪರಿಶಿಷ್ಟ ಜನಾಂಗದ ಸಭ್ಯ ಸುಸಂಸ್ಕೃತ ಮಹಿಳೆಯೋರ್ವರನ್ನು ಏಕವಚನದಲ್ಲಿ ನಿಂದಿಸಿದ್ದು ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರುತ್ತದೆ. ಇದೇ ಕಾರಣಕ್ಕೆ ನಾನು ಬೇಕೆಂದೇ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದೆ ಎಂದು ಅನಂತಕುಮಾರ ಹೆಗಡೆ ಸ್ಪಷ್ಟಪಡಿಸಿದರು