ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ಅವರನ್ನು 3 ದಿನಗಳ ಹೈಡ್ರಾಮಾ ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ.) ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬಂಧಿಸಿದೆ. ಮುಖ್ಯಮಂತ್ರಿ ಹುದ್ದೆಗೆ ಸೊರೇನ್ ರಾತ್ರಿ 8.30ರ ಸುಮಾರಿಗೆ ರಾಜೀನಾಮೆ ನೀಡಿದ್ದು, ಇದಾದ ಕೆಲವೇ ನಿಮಿಷಗಳಲ್ಲಿ ಅವರ ಬಂಧನವಾಗಿದೆ.
ಇದರೊಂದಿಗೆ, ಮುಖ್ಯಮಂತ್ರಿಯಾಗಿದ್ದಾಗಲೇ ತನಿಖಾ ಸಂಸ್ಥೆ ಬಲೆಗೆ ಬಿದ್ದಿದ್ದ ಜಯ ಲಲಿತಾ, ಲಾಲು ಪ್ರಸಾದ್ ಯಾದವ್ ಅವರ ಸಾಲಿಗೆ ಹೇಮಂತ್ ಕೂಡ ಸೇರ್ಪಡೆ ಯಾಗಿದ್ದಾರೆ. ಹೇಮಂತ್ ಬಂಧನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದಾರೆ. ‘ಮೋದಿ ಅವರ ಜತೆ ಯಾರು ಹೋಗುವುದಿಲ್ಲವೋ ಅವರೆಲ್ಲ ಜೈಲಿಗೆ ಹೋದಂತೆ. ಇ.ಡಿ. ಹಾಗೂ ಸಿಬಿಐಗಳನ್ನು ಮೋದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದ್ದಾರೆ.