Home » ಪ್ರಕೃತಿ ನಿಯಮ
 

ಪ್ರಕೃತಿ ನಿಯಮ

by Kundapur Xpress
Spread the love

ನಮ್ಮ ದೇಹವು ಪಂಚಭೂತಗಳಿಂದ ಆಗಿರುವುದರಿಂದ ಅದು ಮರಳಿ ಪಂಚ ಭೂತಗಳಿಗೆ ಸೇರಲೇಬೇಕು. ನಾವು ಪ್ರಕೃತಿಯನ್ನು ಮರ, ಗಿಡ, ಬಳ್ಳಿ, ನೀರು, ಗಾಳಿ ಎಂಬಿತ್ಯಾದಿಯಾಗಿ ಹೇಗೆ ಗುರುತಿಸುತ್ತೇವೋ ಹಾಗೆಯೇ ನಮ್ಮ ಶರೀರ ಕೂಡ ಪ್ರಕೃತಿಗೇ ಸೇರಿದ್ದು. ಪ್ರಕೃತಿಯನ್ನು ಸುಸ್ಥಿತಿಯಲ್ಲಿರಿಸಿ ಕೊಳ್ಳಬೇಕಾದರೆ ನಾವೆಲ್ಲರೂ ಪ್ರಕೃತಿ ನಿಯಮವನ್ನು ಸರಿಯಾಗಿ ಪಾಲಿಸಬೇಕು. ಇಲ್ಲದಿದ್ದರೆ ಪ್ರಕೃತಿಯು ಮಲಿನಗೊಂಡು ವಿಷಮಯವಾಗುವುದು. ಅದರಿಂದ ಸಮಸ್ತ ಜೀವಜಾಲವು ವಿನಾಶಕ್ಕೆ ಗುರಿಯಾಗುವುದು. ನಮ್ಮ ದೇಹ ಕೂಡ ಪ್ರಕೃತಿಯ ಅವಿಭಾಜ್ಯ ಅಂಗವೇ ಆಗಿದೆ. ಪ್ರಕೃತಿಯಲ್ಲಿ ಏನೇನೆಲ್ಲ ಇವೆಯೋ ಅವೆಲ್ಲವೂ ನಮ್ಮೊಳಗೂ ಇದೆ. ಪ್ರಕೃತಿಯಲ್ಲಿನ ಎಲ್ಲ ಜೀವಜಂತುಗಳ ಹಾಗೆ ನಮ್ಮ ಶರೀರವೂ ಜೀರ್ಣಗೊಂಡು ಕೊನೆಗೆ ಪಂಚ ಭೂತವನ್ನೇ ಸೇರುತ್ತದೆ. ಆದುದರಿಂದಲೇ ನಮ್ಮದೆಂದು ನಾವು ತಿಳಿಯುವ ಈ ದೇಹ ನಿಜಕ್ಕೂ ನಮ್ಮದಲ್ಲ. ಅರ್ಥಾತ್ ದೇಹವೆಂದರೆ ನಾವಲ್ಲ. ನಮ್ಮ  ಶರೀರವು ಪ್ರಕೃತಿಗೆ ಸೇರಿರುವುದರಿಂದ ಅದರ ಮೇಲೆ ನಮಗೆ ಯಾವ ಅಧಿಕಾರವೂ ಇಲ್ಲ. ನಮ್ಮ ದೇಹವೇ ನಾವೆಂದು ನಮ್ಮ ಅಸ್ಥಿತೆಯನ್ನು ಗುರುತಿಸಿಕೊಂಡು, ಅದರ ಅಂದ ಚಂದದ ಬಗ್ಗೆ ಗರ್ವ, ಅಹಂಕಾರ ಹಾಗೂ ಅಭಿಮಾನವನ್ನು ಪಡುವಲ್ಲಿ ಯಾವ ಅರ್ಥವೂ ಇಲ್ಲ. ಹಾಗೆ ಮಾಡುವಲ್ಲಿ ಕೇವಲ ನಮ್ಮ ಮೌಡ್ಯವೇ ವ್ಯಕ್ತವಾಗುವುದು. ದೇಹವನ್ನು ದೇವರು ನಮಗೆ ಕೊಟ್ಟಿರುವ ಉಪಕರಣವೆಂದೇ ನಾವು ತಿಳಿದಾಗ ಅದನ್ನು ದೇವರ ಪ್ರೀತ್ಯರ್ಥವಾಗಿ ಲೋಕೋದ್ಧಾರಕ್ಕಾಗಿಯೇ ಬಳಸಬೇಕು ಎಂಬ ಸತ್ಯದ ಅರಿವು ಉಂಟಾಗುತ್ತದೆ. ಪ್ರಕೃತಿ ನಿಯಮವನ್ನು ಪಾಲಿಸುವ ಮೂಲಕ ಹೊರಗಿನ ಪ್ರಕೃತಿಯನ್ನು ಚೆನ್ನಾಗಿಟ್ಟುಕೊಳ್ಳಲು ಹೇಗೆ ಸಾಧ್ಯವೋ ಹಾಗೆಯೇ ಅದೇ ನಿಯಮವನ್ನು ನಮ್ಮ ಪ್ರಕೃತಿಗೂ ಅನ್ವಯಿಸಿಕೊಂಡಾಗಲೇ ನಮ್ಮ ದೇಹವು ಆರೋಗ್ಯಕರವಾಗಿ ಇರಲು ಸಾಧ್ಯ. ದೇಹವು ಆರೋಗ್ಯಕರವಾಗಿದ್ದಲ್ಲಿ ಮನಸ್ಸು ಆನಂದಮಯವಾಗಿರುತ್ತದೆ. ಅದು ನಿರಂತರವಾಗಿ ಉತ್ತಮವಾದ ವಿಚಾರಗಳನ್ನು ಆಲೋಚಿಸುತ್ತಿರುತ್ತದೆ. ದೇವರ ಸ್ಮರಣೆಯಲ್ಲಿ ನಿರತವಾಗಿರುತ್ತದೆ. ಇದರಿಂದ ಪ್ರೇರಿತವಾಗುವ ದೇಹವು ಮನಸ್ಸಿನ ಸದ್ವಿಚಾರಗಳನ್ನು ಅತ್ಯಂತ ದಕ್ಷತೆಯಿಂದ ಸಮರ್ಪಕವಾಗಿ ಕಾರ್ಯಗತಗೊಳಿಸುತ್ತದೆ. ತತ್ ಪರಿಣಾಮವಾಗಿ ಲೋಕಹಿತವು ತನ್ನಿಂತಾನೇ ಸಾಧಿತವಾಗುತ್ತದೆ.

 

   

Related Articles

error: Content is protected !!